ಸೋಮವಾರ, ಮೇ 18, 2015

ಹುಟ್ಟು ಹಬ್ಬದಾಚರಣೆ :

ಹುಟ್ಟು ಹಬ್ಬದಾಚರಣೆ :

ಹಸಿವಿನಿಂದ ಬಳಲುತ್ತಾ ಹಸುಳೆಗಳು
ಗುಡಿಸಲುಗಳಲ್ಲಿ ಆಕ್ರಂದಿತರಾಗಿರುವಾಗ
ನಾನು ಹೇಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿ?

ನಿರೀಕ್ಷೆಗಳೆಲ್ಲಾ ನಿರಾಸೆಗಳಾಗಿ ಯುವಕರು
ದಾರಿತಪ್ಪಿ ದುರ್ಭಲರಾಗುತ್ತಿರುವಾಗ
ನಾನೇಗೆ ಹುಟ್ಟು ಹಬ್ಬದಿ ವಿಜ್ರಂಭಿಸಲಿ ?

ಅನ್ನ ಬೆಳೆವ ಅನ್ನದಾತ ಸಂಕಷ್ಟಕ್ಕೊಳಗಾಗಿ
ಸಾಯುತ್ತಿರುವ ಸೂತಕದ ದಿನಮಾನಗಳಲ್ಲಿ
ಹೇಗೆ ತಾನೆ ಹುಟ್ಟು ಹಬ್ಬ ಮಾಡಿಕೊಳ್ಳಲಿ ?

ಅಸಂಖ್ಯಾತರ ಬಲಿದಾನದಿಂದ ಪಡೆದ ಸ್ವತಂತ್ರ ದೇಶ
ಸ್ವಾಭಿಮಾನ ಸ್ವಾವಲಂಬನೆ ಮಾರಿಕೊಳ್ಳುತ್ತಿರುವಾಗ
ಹುಟ್ಟು ಹಬ್ಬವೆಂದು ಹೇಗೆ ವಿಜ್ರಂಬಿಸಲಿ ?

ಬಂಡವಾಳಿಗರ ಬಂಧಿಖಾನೆಯಲ್ಲಿ ಭಾರತಮಾತ
ಬಂಧಿಯಾಗಿ ನರಳುತ್ತಿರುವಾಗ
ಯಾವ ಖುಷಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿ ?

ಭಾರತದ ಭಾಗ್ಯ ವಿಧಾತರು ದಲ್ಲಾಳಿಗಳಾಗಿ
ನೆಲ ಜಲ ಜನರನ್ನು ಶೋಷಿಸುತ್ತಿರುವಾಗ
ನಾನೆಂತಾ ಹುಟ್ಟು ಹಬ್ಬ ಎಂದು ಮೆರೆದಾಡಲಿ ?

ಈ ದುರಾವಸ್ಥೆ ಬದಲಿಸುವ ಶಕ್ತಿ ನನಗಿಲ್ಲ
ದಮನಿತರ ದುಃಖಕ್ಕೆ ಸಾಂತ್ವನ ಹೇಳುವುದೇ
ನನ್ನ ಹುಟ್ಟು ದಿನದ ಕಾಯಕವಾಗಲಿ.

ನೂರಾರು ಯುವಕರು ದಾರಿ ತಪ್ಪದ ಹಾಗೆ
ವ್ಯಕ್ತಿತ್ವ ವಿಕಸನಗೊಳಿಸುವುದು
ಹುಟ್ಟು ದಿನದ ಧ್ಯೇಯವಾಗಲಿ.

ಕಾವ್ಯ ಖಡ್ಗವಾಗದೇ ಕಣ್ಣೀರೊರೆಸುವ ಕೈಯಾಗಲಿ
ಬರಹ ಅನ್ಯಾಯ ಎದುರಿಸುವ ಅಸ್ತ್ರವಾಗಲಿ
ಎನ್ನುವುದೇ ನನ್ನ ಹುಟ್ಟು ಹಬ್ಬದ ದಿನದ ಪ್ರತಿಜ್ಞೆಯಾಗಿರಲಿ.

ಹಾಡು ನೊಂದವರ ದ್ವನಿಯಾಗಲಿ
ನಾಟಕ ದುರಾವಸ್ಥೆಗೆ ಹಿಡಿವ ಕನ್ನಡಿಯಾಗಲಿ
ಹುಟ್ಟಿದ್ದಕ್ಕೂ ನನ್ನ ಬದುಕು ಸಾರ್ಥಕವಾಗಲಿ..

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ