ಸೋಮವಾರ, ಮೇ 25, 2015

ಸಖಿ ಗೀತೆ.....241

ಸಖಿ...

ಹತ್ತು ಮಕ್ಕಳನ್ನ
ಹೆತ್ತು ಹೊತ್ತು
ಸಾಕಿ ಸಲುಹಿದ
ಹೆತ್ತವ್ವನನ್ನು
ಹತ್ತರಲ್ಲಿ ಒಬ್ಬರೂ
ನೆಟ್ಟಗೆ ನೋಡಿಕೊಳ್ಳಲಾಗದ
ಈ ಕಾಲದಲ್ಲಿ
'ತಾಯಂದಿರ ದಿನ'ದಂದು
ಅವ್ವನನ್ನು ಅಟ್ಟಕ್ಕೇರಿಸಿ
ದೇವರನ್ನಾಗಿಸುವುದೆಂತಾ
ವಿಪರ್ಯಾಸ....?
* * *

ಹಳ್ಳಿ ಹಳ್ಳಿಗಳಲಿ
ಹೆತ್ತವ್ವನನ್ನು
ತಬ್ಬಲಿಯಾಗಿಸಿ
ಪಟ್ಟಣ ಸೇರಿದ
ಮಕ್ಕಳೆಲ್ಲಾ ಸೇರಿ
'ಅಮ್ಮಂದಿರ ದಿನ'
ಶುಭಾಷಯ ವಿನಿಮಯ
ಮಾಡಿ ಸಂಭ್ರಮಿಸುವುದೆಂತಾ
ವಿಚಿತ್ರ ಸಾಹಸ...?
* * *

ಹೆಂಡತಿಯೊಲುಮೆಗೆ
ಕರಗಿ ನೀರಾಗಿ
ಅವ್ವನಿಂದಂತರ
ಕಾಪಾಡಿಕೊಂಡ
ಪುತ್ರರತ್ನರನೇಕರು
'ಹೆತ್ತವ್ವನ ದಿನ'ವೆಂದು ಹೊಗಳಿ
ಹೊನ್ನಶೂಲಕ್ಕೇರಿಸುವುದೆಂತಾ
ಮಾತೃಪ್ರೇಮ ಪರಿಹಾಸ...?
* * *

ಯಾವುದೇ ತಾಯಿ
ಬಾಯಿಲ್ಲದ ದೇವರಲ್ಲ,
ಎಲ್ಲರಂತೆ ಆಕೆಯೂ
ಮನುಷ್ಯಳೆನ್ನುವುದು ಸುಳ್ಳಲ್ಲ..
ಬೆಳೆದ ಮಕ್ಕಳಿಂದ
ಒಂದಿಷ್ಟು ಪ್ರೀತಿ ಗೌರವ
ಕಾಳಜಿ ಕಳಕಳಿ
ಹೊರತುಪಡಿಸಿ
ಹೆತ್ತವ್ವ ಇನ್ನೇನು
ಬಯಸೋದಿಲ್ಲ...
ಹೆತ್ತಮ್ಮನ ಈ ಹಿರಿದಾಸೆ
ಈಡೇರಿಸುವವರಿಗೆ ಪ್ರತಿದಿನವೂ
'ತಾಯಂದಿರ ದಿನವೇ'.....!
ತಾಯಿಯನ್ನು ತಬ್ಬಲಿ ಮಾಡಿ
'ತಾಯಂದಿರ ದಿನ'ವೆಂದು
ಸಂಭ್ರಮಿಸುವುದು ತರವೇ....?

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ