ಸೋಮವಾರ, ಮೇ 25, 2015

ಬೇಡ ಪಲಾಯಣ :

ಬೇಡ ಪಲಾಯಣ :

ಪಲಾಯಣ ಬೇಡಾ ಪಲಾಯಣ
ಬದುಕಿದು ನಿತ್ಯ ರಾಮಾಯಣ II ಪ II

ಸಂಕಷ್ಟದ ದಾರಿ
ಮುಂದಿದೆ ನಾರಿ
ಸಂಸಾರದ ಬಂಡಿ
ತಲುಪಲಿ ಗುರಿ II 1 II

ಸಾಕೆನ್ನುವ ಮಾತು ಸಾಕು
ಇದ್ದು ಜಯಿಸಲೇ ಬೇಕು
ಬಯಸಿದ್ದೆಲ್ಲಾ ಸಿಗುವುದೇ ಇಲ್ಲ
ಸಿಕ್ಕ ಸೌಭಾಗ್ಯ ದೂರುವೆಯಲ್ಲ. II 2 II

ಬಾಳ ವೀಣೆ ನುಡಿದರೆ ಅಪಸ್ವರ
ದೂರಾಗುವುದೇನೇ ಪರಸ್ಪರ
ಸರಿಪಡಿಸಿ ನುಡಿಸು ಸಪ್ತಸ್ವರ
ಚಿಗುರಲಿ ಒಣಗಿದ ಮಾಮರ II 3 II

ಕಾಲನ ಚಕ್ರ ನಿಲ್ಲುವುದಿಲ್ಲ
ದ್ವೇಷ ಆಕ್ರೋಶ ಗೆಲ್ಲುವುದಿಲ್ಲ
ಸರಸ ವಿರಸವೇ ಸಹಜೀವನ
ಅರಿತು ನಡೆದರೆ ಬದುಕು ಪಾವನ. II4 II

ಹೆದರಿ ಓಡುವುದು ತರವೇನು ?
ಕಷ್ಟಗಳು ಕರಗದ ಗಂಟೇನು ?
ಕತ್ತಲೆ ಕಳೆದು ಬೆಳಕು ಬಾರದೇನು ?
ಆಷಾಢದ ನಂತರ ವಸಂತ ಬಂದೇ ಬರುವನು... II 5II

ಪಲಾಯಣ ಬೇಡಾ ಪಲಾಯಣ
ಬದುಕಿದು ನಿತ್ಯ ರಾಮಾಯಣ

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ