ಸೋಮವಾರ, ಮೇ 18, 2015

ನಿ-ವೇದನೆ :

ನಿ-ವೇದನೆ :

ನನಗೆ ಹಿಂಜರಿಕೆ ಇದೆ ಪ್ರೀತಿಸಲು
ಪ್ರೀತಿಸಿದ ನಂತರ ಮದುವೆಯಾಗಲು
ಜಾತಿ ಬೇಲಿ ನಾವೇನೋ ದಾಟಬಹುದು
ಜಾತಿ ಜಂತುಗಳು ಜೇಡನ ಬಲೆಹೆಣೆದು ಕಾವಲಿವೆ !!

ಜಾತಿವಾದಿಗಳೆದೆಯಲ್ಲಿದೆ ಖಾಪ್ ಪಂಚಾಯತಿ
ಮರ್ಯಾದೆಗೇಡು ಹತ್ಯೆಗಳ ಸರಣಿ ಸುದ್ದಿ ಮಾಧ್ಯಮಗಳಲ್ಲಿ
ವಿಕ್ಷಪ್ತ ಸಮಾಜದಲ್ಲಿ ಸಂಸಾರ ಮಾಡೋದಾದರೂ ಹೇಗೆ?
ಪ್ರಕ್ಷುಬ್ಧ ಪ್ರವಾಹದ ವಿರುದ್ಧ ಈಜಿ ಜೈಸೋದಾದರೂ ಹೇಗೆ?

ಮನೆಬಿಟ್ಟು ಓಡಿಹೋಗಿ ಕೂಡೋಣವೆಂದರೂ ಹೋಗೊದೆಲ್ಲಿಗೆ
ಬದುಕಲೇಬೇಕಲ್ಲವೇ ಇದೇ ಸಮಾಜದೊಳಗಡೆಗೆ
ಜಾತಿ ಧರ್ಮ ಮೇಲುಕೀಳಿನ ಗೋಡೆಗಳು ಚಿದ್ರವಾಗುವವರೆಗೂ
ನೆಮ್ಮದಿಯ ಬದುಕಿಲ್ಲ ಪ್ರೇಮ ವಿವಾಹಿಗಳಿಗೆ...

ಒಡೆಯುವುದಿದ್ದರೆ ಒಡೆದು ಬಿಡು ಧರ್ಮದ ಉಕ್ಕಿನ ಗೋಡೆಗಳ
ಕೀಳುವುದಿದ್ದರೆ ಕಿತ್ತು ಬಿಡು ಜಾತಿ ವಿಷ ಬೇಲಿಗಳ
ಕೆಡಹುವುದಿದ್ದರೆ ಕೆಡವಿಬಿಡು ಅಸಮಾನ ಅಂತಸ್ತುಗಳ
ಆಗದಿದ್ದರೆ ಮರೆತುಬಿಡು ಪ್ರೀತಿ ಪ್ರೇಮ ಮದುವೆಗಳ....!

ವಂಚನೆ, ಮೋಸ, ನಂಬಿಕೆದ್ರೋಹ.. ಎಂದೆಲ್ಲ
ಬಿರುದು ಬೈಗುಳಗಳ ಆಲಾಪ ದಯವಿಟ್ಟು ನಿಲ್ಲಿಸು
ಪ್ರೀತಿಯೆಂಬುದು ದಿಟವಾಗಿದ್ದರೆ ಹೆತ್ತವರನ್ನು ಒಪ್ಪಿಸು
ಖುಷಿಯಿಂದ ಕುಣಿಯುತ್ತ ಬರುವೆ ನಿನ್ನೆದೆಯರಮನೆಗೆ..!!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ