ಗುರುವಾರ, ಮೇ 21, 2015

ಅಪ್ಪನ ಆಕ್ರಂದನ :

ಅಪ್ಪನ ಆಕ್ರಂದನ :

ಮಗಳು ಮನೆಯೊಳಗಿಲ್ಲ ಮನವೇ
ಮನತುಂಬ ಕತ್ತಲಾಯಿತಲ್ಲೋ ತನುವೇ....

ಹೆತ್ತ ಮಗಳು ಕತ್ತು ಕೊಯ್ದು
ಎತ್ತ ಹೋದಳು ದಾರಿ ಕಾಣದು ಮನವೇ

ಲಾಲಿ ಹಾಡಿ ತುತ್ತು ಕೊಟ್ಟು
ಕೊರತೆ ಕಾಣದೆ ಬೆಳೆದ ಮಗಳೆತ್ತ ಹೋದಳು ಮನವೇ...

ಕೈಗೆ ಬಂದ ಹದಿಹರೆಯದ ಮಗಳು
ಕೈಗೋಲು ಕಿತ್ತು ಕಾಣೆಯಾದಳು ಮನವೇ...

ಕನಸು ನನಸಾಗೂ ಮುನ್ನ
ಬೆಳಕು ಮುಳುಗಿ ಕತ್ತಲಾಯ್ತಲ್ಲೋ ಮನವೇ...

ಮಲ್ಲಿಗೆಯ ಮನವು ಕಲ್ಲಾಗಿ ಹೋಗಿ
ಮಾತು ಕರಗಿ ಮೌನವಾಯ್ತಲ್ಲೋ ಮನವೇ..

ಹೂವಂತ ಹುಡುಗಿ ಹಾವಾಗಿ ಕೆರಳಿ
ವಿಷ ಕಕ್ಕಿ ಮಾಯವಾದಳು ಮನವೇ...

ರೆಕ್ಕೆ ಬಲಿತ ಹಕ್ಕಿ ಹಾರಿ
ಗೂಡು ಬಣಬಣ ಬರಿದಾಯಿತಲ್ಲೋ ಮನವೇ...

ಅನುದಿನ ಜೊತೆಯಲ್ಲಿದ್ದ ಜೀವ
ಒಂದು ಮಾತು ಹೇಳದೇ ಓಡಿಹೋಯ್ತಲ್ಲೋ ಮನವೇ...

ದೂರ ದಾರಿ ಒಂಟಿ ಪಯಣ
ಊರುಗೋಲು ದೂರವಾಯ್ತಲ್ಲೋ ಮನವೇ...

ಮಗಳು ಮನೆಯೊಳಗಿಲ್ಲ ಮನವೇ
ಮನತುಂಬ ಕತ್ತಲಾಯಿತಲ್ಲೋ ತನುವೇ....

- ಯಡಹಳ್ಳಿ

( ಯೌವನದ ಮದದಲ್ಲಿ ನಿರ್ಧಾಕ್ಷಿಣ್ಯವಾಗಿ ಹೆತ್ತವರ ಬಿಟ್ಟು ಹೋದ ಮಗಳ ಅಗಲಿಕೆಯ ನೋವನ್ನು ಅನುಭವಿಸುವ ತಂದೆಯರ ಸಂಕಟಗಳ ಅನಾವರಣ ಮಾಡುವ ಕವಿತೆ ಇದು )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ