ಸೋಮವಾರ, ಮೇ 25, 2015

ಸಖಿ ಗೀತೆ....253

ಸಖಿ....

ಜನತೆ
ಗುಡಿ ಸುತ್ತುವುದು
ದೇವರ ಭಜಿಸುವುದು
ಪೂಜಾರ್ಚನೆ ಮಾಡುವುದು...

ಪ್ರದಕ್ಷಣೆ ಹಾಕಿ
ದಕ್ಷಿಣೆ ಕೊಟ್ಟು
ಪಾಪ ಪರಿಹಾರ
ಮಾಡಿಕೊಳ್ಳುವುದೆಲ್ಲಾ...

ದೇವರಾಣೆ
ಭಕ್ತಿಯಿಂದಲ್ಲ
ಕೇವಲ
ಭಯದಿಂದ......!

ಮನುಜನಿಗೆ ಕೇಳಿದ್ದೆಲ್ಲಾ ಸಿಕ್ಕಿದ್ದರೆ
ಬಯಸಿದ್ದೆಲ್ಲಾ ದಕ್ಕಿದ್ದರೆ
ದೇವರೇ ತಾನಾಗುತ್ತಿದ್ದ
ಭಗವಂತ ಗಡಿಪಾರಾಗುತ್ತಿದ್ದ....!!

ಭಯಹುಟ್ಟಿಸಿ
ಭಗವಂತನ
ಸೃಷ್ಟಿಸಿದವರು....
ಭ್ರಮೆ ಹುಟ್ಟಿಸಿ
ಕರ್ಮಸಿದ್ದಾಂತ
ಪ್ರತಿಪಾದಿಸಿದವರು...
ಧರ್ಮ-ದೇವರ ಹೆಸರಲ್ಲಿ
ಪುಣೀತರಾದರು.....!!!

ದುಡಿದುಡಿದು ಸವೆದವರು,
ಮೌಢ್ಯಗಳ ನಂಬಿದವರು....
ಶತಶತಮಾನಗಳಿಂದ
ದೇವರ ಪಾದಕೆ ಶರಣಾದರು...
ಧರ್ಮದ ದಲ್ಲಾಳಿಗಳು
ದೇವರಾದರು....!!!

-ಶಶಿ ಯಡಹಳ್ಳಿ

ಸಖಿ ಗೀತೆ.....252

ಸಖಿ...

ನಿನ್ನ ಹೃದಯದಲಿ
ಒಂದಿಷ್ಟು ಜಾಗ
ಕೇಳುವವರಿಗೊಂದು
ಪ್ರಶ್ನೆ ಕೇಳು....!

ನಿನ್ನ ನೋವಿನಲ್ಲಿ
ಪಡೆಯುತ್ತಾರಾ ಪಾಲು..
ಮದುವೆಯಾಗಿ ಕೊಡುತ್ತಾರಾ
ಘನತೆಯ ಬಾಳು.....!!

-ಯಡಹಳ್ಳಿ

ಸಖಿ ಗೀತೆ......251

ಸಖಿ...

ಕಾಗೆ ಗೂಡಲ್ಲಿ
ಕೋಗಿಲೆ
ಮೊಟ್ಟೆ ಇಡುವುದು
ಗೊತ್ತಿತ್ತು....!

ಮೊಟ್ಟೆ ಬದಲು
ಮಗುವನ್ನೇ ನನ್ನ
ಮಡಿಲಿಗಿಟ್ಟ ಆ
ತಾಯಿಯ ಕಷ್ಟ ಅದೇನಿತ್ತೋ...!!

ಪರಿತ್ಯಕ್ತ ಮಗು
ಮತ್ತದರ ನಗು
ಒಂಟಿ ಬದುಕಿಗೆ
ಆಸರೆ....

ಸಕಲ ಸುಖ ಸಂಪತ್ತು
ಆರೋಗ್ಯ ಆಯಸ್ಸು
ಕೊಡಲಿ ಮಗುವಿಗೆ
ಈ ಧರೆ.....

-ಶಶಿ ಯಡಹಳ್ಳಿ

ಸಖಿ ಗೀತೆ......250

ಸಖಿ...

ನನಗನ್ನಿಸುತ್ತದೆ...

ಅಪಾರವಾಗಿ
ಪ್ರೀತಿಸಿದ ಜೀವ
ಅನಿರೀಕ್ಷಿತವಾಗಿ
ಅಕಾರಣ
ನಿರ್ಲಕ್ಷಿಸಿದಾಗ
ಎಲ್ಲ ಕಳೆದುಕೊಂಡು
ನಿರಾಶ್ರಿತನಾದಂತೆ...

ನಿರ್ಲಕ್ಷವನ್ನೂ
ಅಲಕ್ಷಿಸಿದಂತೆ
ಅಭಿನಯಿಸುವ
ಅನಿವಾರ್ಯವಂತೂ
ಹೃದಯವೇ ನಿಂತಂತೆ....!!

-ಶಶಿ ಯಡಹಳ್ಳಿ

ಸಖಿ ಗೀತೆ....249

ಸಖಿ...

ಯಾವಾಗಲೂ
ಸದ್ದು ಮಾಡೋದು
ನಾಣ್ಯವೇ ಹೊರತು
ನೋಟಲ್ಲ....!

ನಿಜವಾಗಲೂ
ಮೌನಕ್ಕಿರುವ
ಬೆಲೆ ಎಂದೂ
ಮಾತಿಗಿಲ್ಲ !!

ನೋಟು ಹೆಚ್ಚಿರಲಿ
ಚಿಲ್ಲರೆ ನಾಣ್ಯವೂ
ಜೊತೆಗಿರಲಿ...

ಮೌನ ಮೇಲಾಗಲಿ
ಅಗತ್ಯವಿದ್ದಾಗಷ್ಟೇ
ಮಾತು ಖರ್ಚಾದಲಿ....

ಹಗುರಾಗಿರುವ
ನೋಟಿರಲು
ಭಾರದ ನಾಣ್ಯದ ಹುಚ್ಚೇಕೆ.?

ಮೌನಕೆ ಬೆಲೆ
ಹೆಚ್ಚಿರಲು
ಅತೀ ಮಾತಿನ ಹಂಗೇಕೆ...?

-ಶಶಿ ಯಡಹಳ್ಳಿ

ಸಖಿ ಗೀತೆ......248

ಸಖಿ...

ಕಪ್ಪೆಯೊಂದು
ಹೆಮ್ಮರವನೊಂದು
ಏರತೊಡಗಿತು...

ಕಪ್ಪೆ ಬಳಗ ಒಂದಾಗಿ
'ಸಾಧ್ಯವಿಲ್ಲ ಸಾಧುವಲ್ಲ'ವೆಂದು
ಕೂಗತೊಡಗಿತು...

ಹೊಸ ಹುರುಪಿನಿಂದ
ಜಿಗಿಜಿಗಿದು ಕಪ್ಪೆ
ಗಮ್ಯ ತಲುಪಿತು...

ಕಪ್ಪೆ ಸಾಹಸ ಕಂಡು
ಬೆರಗಾದ ಬಳಗ
'ಹೇಗೆ ಸಾಧ್ಯ'ವೆಂದು ಕೇಳಿತು..

'ನೀವು ಕೊಟ್ಟ ಪ್ರೇರಣೆ
ಸಾಧ್ಯವಾಯ್ತು ಸಾಧನೆ'
ಬಳಗಕೆ ಕಪ್ಪೆ ನಮಿಸಿತು....

ಬಳಗದ ನಿರುತ್ಸಾಹದ ಮಾತ
ಪ್ರೋತ್ಸಾಹವೆಂದುಕೊಂಡು
ಕೆಪ್ಪ ಕಪ್ಪೆ ತಪ್ಪು ತಿಳಿದು...

ಉತ್ಸಾಹ ಹೆಚ್ಚಾಗಿ
ಉತ್ತುಂಗಕ್ಕೇರಿ ಅಸಾಧ್ಯವನ್ನು
ಸಾಧ್ಯಮಾಡಿತು...

ನಿರುತ್ಸಾಹಕ್ಕೆ ಕಿವುಡರಾಗಿ
ಸಾಧನೆಯತ್ತ ಮುಂದೆ ಸಾಗಿ
ಎಂಬುದೇ ಈ ಕವಿತೆ ನೀತಿಯು...

-ಶಶಿ ಯಡಹಳ್ಳಿ
(ಕೆಪ್ಪ =ಕಿವುಡು )

ಸಖಿ ಗೀತೆ....247

ಸಖಿ.....

ಸಾಧನೆಯತ್ತ
ಸಾಗುವಾಗ
ಮೊದಮೊದಲು
ಬರೀ ಸೋಲು....!

ಹಾಕಿದ ಶ್ರಮ
ಹೂಡಿದ ಹಣ
ಬಳಸಿದ ಸಮಯ
ಎಲ್ಲಾ ಪೋಲು....!!

ಆದರೆ....

ಸೋಲುಗಳೇ
ಗೆಲುವಿಗೆ ಸೋಪಾನ,
ಸತತ ಪ್ರಯತ್ನದಿಂದ
ಸಾಧನೆ ಸಾಕಾರ...

ಸೋಲಿನ ಭಯದಿ
ಸಾಗದೇ ಹೋದರೆ
ಸಾಧನೆ ಎಂಬುದು
ಕನಸಿನ ಗಂಟು....

ನೀರನು ಮರ್ಧಿಸಿ
ಶಕ್ತಿ ಪಡೆಯಲು
ಆಗದು ಎಂದರೆ
ಸಿಗುತ್ತಿತ್ತಾ ಕರೆಂಟು...

-ಶಶಿ ಯಡಹಳ್ಳಿ

ಬೇಡ ಪಲಾಯಣ :

ಬೇಡ ಪಲಾಯಣ :

ಪಲಾಯಣ ಬೇಡಾ ಪಲಾಯಣ
ಬದುಕಿದು ನಿತ್ಯ ರಾಮಾಯಣ II ಪ II

ಸಂಕಷ್ಟದ ದಾರಿ
ಮುಂದಿದೆ ನಾರಿ
ಸಂಸಾರದ ಬಂಡಿ
ತಲುಪಲಿ ಗುರಿ II 1 II

ಸಾಕೆನ್ನುವ ಮಾತು ಸಾಕು
ಇದ್ದು ಜಯಿಸಲೇ ಬೇಕು
ಬಯಸಿದ್ದೆಲ್ಲಾ ಸಿಗುವುದೇ ಇಲ್ಲ
ಸಿಕ್ಕ ಸೌಭಾಗ್ಯ ದೂರುವೆಯಲ್ಲ. II 2 II

ಬಾಳ ವೀಣೆ ನುಡಿದರೆ ಅಪಸ್ವರ
ದೂರಾಗುವುದೇನೇ ಪರಸ್ಪರ
ಸರಿಪಡಿಸಿ ನುಡಿಸು ಸಪ್ತಸ್ವರ
ಚಿಗುರಲಿ ಒಣಗಿದ ಮಾಮರ II 3 II

ಕಾಲನ ಚಕ್ರ ನಿಲ್ಲುವುದಿಲ್ಲ
ದ್ವೇಷ ಆಕ್ರೋಶ ಗೆಲ್ಲುವುದಿಲ್ಲ
ಸರಸ ವಿರಸವೇ ಸಹಜೀವನ
ಅರಿತು ನಡೆದರೆ ಬದುಕು ಪಾವನ. II4 II

ಹೆದರಿ ಓಡುವುದು ತರವೇನು ?
ಕಷ್ಟಗಳು ಕರಗದ ಗಂಟೇನು ?
ಕತ್ತಲೆ ಕಳೆದು ಬೆಳಕು ಬಾರದೇನು ?
ಆಷಾಢದ ನಂತರ ವಸಂತ ಬಂದೇ ಬರುವನು... II 5II

ಪಲಾಯಣ ಬೇಡಾ ಪಲಾಯಣ
ಬದುಕಿದು ನಿತ್ಯ ರಾಮಾಯಣ

-ಶಶಿ ಯಡಹಳ್ಳಿ

ಸಖಿ ಗೀತೆ...246

ಸಖಿ...

ಪರೀಕ್ಷೆಯಲ್ಲಿ
ವಿದ್ಯಾರ್ಥಿಗಳು
ಲೆಕ್ಕ ತಪ್ಪಿದರೆ
ಫೇಲ್....!

ನ್ಯಾಯಾಲಯದಲ್ಲಿ
ನ್ಯಾಯಾಧೀಶರೇ
ಲೆಕ್ಕಾಚಾರ ತಪ್ಪಿದರೆ
ಆರೋಪಿ ಪಾಸ್....!!

ಅಮ್ಮಾ ಅದೇನು
ನಿನ್ನ ಮಹಿಮೆ...
ಭವ್ಯ ಭಾರತದ
ಭಾರೀ ಹಿರಿಮೆ...!!!

-ಶಶಿ ಯಡಹಳ್ಳಿ

ಸಖಿ ಗೀತೆ...245

ಸಖಿ....

ಮನುಷ್ಯ ಸತ್ತಾಗ
ಸತ್ತಿದ್ದೇ ಗೊತ್ತಾಗೊಲ್ಲ
ಅನ್ನೊದೇನೋ ಸರಿ.......!

ಬದುಕಿದ್ದಾಗಲೂ
ಬದುಕಿದ್ಯಾರಿಗೂ
ಗೊತ್ತಾಗಲಿಲ್ಲವೆಂದರೆ
ಬದುಕಿ ಏನು ಪ್ರಯೋಜನಾರೀ....?

ಹುಟ್ಟಿನಂತೆ ಸಾವೂ
ನಮ್ಮ ಅಂಕೆಯಲ್ಲಿಲ್ಲ
ಆದರೆ ಬದುಕು ಕೈಲಿದೆ...
ಬೇಕಾದಂತೆ
ಬದಲಾಯಿಸಲು
ಅವಕಾಶವಿದೆ....!!

ಸಮಾಜದೊಳತಿಗಾಗಿ
ಶ್ರಮಿಸಬೇಕಿದೆ...
ಮನುಷ್ಯ ಸತ್ತಮೇಲೂ
ಬದುಕಬೇಕಿದೆ....!!!

-ಯಡಹಳ್ಳಿ

ಸಖಿ ಗೀತೆ....244

ಸಖಿ...

ಹೀಗೊಂದು
ನ್ಯಾಯಾಲಯ
'ಅಮ್ಮ' ನನ್ನು
ದೋಷಿ ಎಂದರೆ
ಮತ್ತೊಂದು
ನಿರ್ದೋಷಿ ಎಂದು
ಬಿಡುಗಡಿಸುತ್ತದೆ...

ಭಾರೀ ಭ್ರಷ್ಟಾಚಾರಿ
ಭಾಗ್ಯವಂತರಿಗೆ
ತಕ್ಷಣ ಜಾಮೀನು ...

ಜುಜಬೀ ಚಿಲ್ಲರೆ
ಅಪರಾಧಿಗಳಿಗೆ
ಶಿಕ್ಷೆ ಜೈಲು...

ಭವ್ಯ ಭಾರತದ
ಘನ ನ್ಯಾಯಾಲಯದಲ್ಲಿ
ನ್ಯಾಯ ಮಾರಾಟಕ್ಕಿದೆ....!!

-ಶಶಿ ಯಡಹಳ್ಳಿ

ಸಖಿ ಗೀತೆ..243

ಸಖಿ...

ಬಿಡುಗಡೆಗೊಂಡಳು ಅಮ್ಮ
ಕಾನೂನೆಂಬುದು ಭ್ರಷ್ಟರ
ಬರೀ ಹೆದರಿಸೋ ಗುಮ್ಮ...

ಎಣಿಸಿದವರ್ಯಾರು
ನ್ಯಾಯಾಲಯಕೆ
ನಾಲಿಗೆ ಎಷ್ಟು?
ತಿಳಿದವರ್ಯಾರು
ಕಾನೂನೊಳಗೆ
ಕಳ್ಳ ದಾರಿಗಳೆಷ್ಟು?

ಅವರದೇ ಕಾನೂನು
ಅವರದೇ ನ್ಯಾಯಾ,
ಪ್ರಜೆಗಳ ವಂಚಿಸಿ
ಪ್ರಭುಗಳ ಕಾಯುವ ಮಾಯಾ....!
ಸಂವಿಧಾನದ ಎದೆಗೆ
ಅಗಣಿತ ಗಾಯಾ....!!

ನ್ಯಾಯದೇವತೆ ಕಣ್ಕಟ್ಟಿದ
ಬಟ್ಟೆ ಬಿಚ್ಚುವವರ್ಯಾರು?
ಭ್ರಷ್ಟ ಬೆಕ್ಕುಗಳಿಗೆ
ಗಂಟೆ ಕಟ್ಟುವವರ್ಯಾರು?
ಹೀಗೆಯಾದರೆ ನ್ಯಾಯಾಂಗವ
ನಂಬುವವರ್ಯಾರು...?

-ಶಶಿ ಯಡಹಳ್ಳಿ

ತಬ್ಬಲಿ ಕಂದನ ಆಕ್ರಂದನ :

ತಬ್ಬಲಿ ಕಂದನ ಆಕ್ರಂದನ :

'ತಾಯಂದಿರ ದಿನ ತಾಯಿಗೆ
ಶುಭಾಷಯ ಹೇಳುವುದಿಲ್ಲ,
ನೀನೇ ನನಗೆ ತಾಯಿ ತಂದೆ ಎಲ್ಲಾ...'
ಎಂದು ಮಗು ಅಪ್ಪನನ್ನು ಅಪ್ಪಿಕೊಂಡಿತು

'ಬರೀ ಹೆತ್ತರೆ ಸಾಕೇನಪ್ಪಾ?
ಕಂದನ ತೊರೆದವಳು ತಾಯೇನಪ್ಪ?
ಹೆತ್ತವಳಿಗೆ ಕರುಣೆ ಇಲ್ಲೇನಪ್ಪಾ?..'
ತಬ್ಬಲಿ ಕಂದ ತಂದೆಯನ್ನು ತಬ್ಬಿಕೊಂಡಿತು..

'ತಾಯಿ ದೇವರು ಅಂತಾರಪ್ಪ
ದೇವರಿಗೂ ದ್ವೇಷ ಉಂಟೇನಪ್ಪ?
ತಾಯಿದ್ದೂ ನಾ ತಬ್ಬಲಿ ಯಾಕಪ್ಪಾ?'
ತಾಯಿ ತೊರೆದ ಕಂದ ಕಣ್ಣೀರಾಯಿತು...

''ಹೇಳು ತಂದೆ ಮಾರಿಯನ್ಯಾಕೆ ಕರೆತಂದೆ ?
ನನ್ನನ್ಯಾಕೆ ಈ ಭೂಮಿಗೆ ಎಳೆತಂದೆ?
ನಡೆ ನೀ ಮುಂದೆ ನಾ ನಿನ್ನ ಬೆನ್ನಿಂದೆ...''
ನೊಂದ ಕಂದ ತಂದೆಯ ಹೆಗಲೇರಿತು....

''ಹೋಗಲಿ ಬಿಡು ಕಂದಾ
ನಿನ್ನ ನಗುವೆನಗೆ ಮಹದಾನಂದ.
ಪಡಬೇಡ ವ್ಯಥೆ ಆಕೆ ನಿಜವಾಗಿ ದೇವತೆ,
ಕಲ್ಲೆದೆಯ ದೇವರಿಗೆ ಕರುಣೆ ಭಾವನೆಗಳ ಕೊರತೆ...''
ನೊಂದ ತಂದೆ ಕಂದನ ಸಂತೈಸಿತು.

-ಶಶಿ ಯಡಹಳ್ಳಿ

ಸಖಿ ಗೀತೆ....242

ಸಖಿ....

ರೆಕ್ಕೆ ಬಲಿತ ಹಕ್ಕಿಗಳು
ಗೂಡು ತೊರೆದು
ಹಾರಿ ಹೋಗಿ
ಪಟ್ಟಣವ ಸೇರಿ...

ವರುಷಕೊಮ್ಮೆ ಹರುಷದಿಂದ
'ಮಾತೆಯರ ದಿನ'
ಸಂಬ್ರಮದಿ ಆಚರಿಸಿ
ಧನ್ಯತೆ ಪಡೆವ ಪರಿಗೆ....

ಹೆತ್ತ ಒಡಲು
ಉಪ್ಪಿನ ಕಡಲಾಯಿತು,
ಬಾಳಸಂಜೆಯಲಿ ಮಾತೆಯರ
ಮಡಿಲು ಬರಿದಾಯಿತು....!!

-ಶಶಿ ಯಡಹಳ್ಳಿ

ಸಖಿ ಗೀತೆ.....241

ಸಖಿ...

ಹತ್ತು ಮಕ್ಕಳನ್ನ
ಹೆತ್ತು ಹೊತ್ತು
ಸಾಕಿ ಸಲುಹಿದ
ಹೆತ್ತವ್ವನನ್ನು
ಹತ್ತರಲ್ಲಿ ಒಬ್ಬರೂ
ನೆಟ್ಟಗೆ ನೋಡಿಕೊಳ್ಳಲಾಗದ
ಈ ಕಾಲದಲ್ಲಿ
'ತಾಯಂದಿರ ದಿನ'ದಂದು
ಅವ್ವನನ್ನು ಅಟ್ಟಕ್ಕೇರಿಸಿ
ದೇವರನ್ನಾಗಿಸುವುದೆಂತಾ
ವಿಪರ್ಯಾಸ....?
* * *

ಹಳ್ಳಿ ಹಳ್ಳಿಗಳಲಿ
ಹೆತ್ತವ್ವನನ್ನು
ತಬ್ಬಲಿಯಾಗಿಸಿ
ಪಟ್ಟಣ ಸೇರಿದ
ಮಕ್ಕಳೆಲ್ಲಾ ಸೇರಿ
'ಅಮ್ಮಂದಿರ ದಿನ'
ಶುಭಾಷಯ ವಿನಿಮಯ
ಮಾಡಿ ಸಂಭ್ರಮಿಸುವುದೆಂತಾ
ವಿಚಿತ್ರ ಸಾಹಸ...?
* * *

ಹೆಂಡತಿಯೊಲುಮೆಗೆ
ಕರಗಿ ನೀರಾಗಿ
ಅವ್ವನಿಂದಂತರ
ಕಾಪಾಡಿಕೊಂಡ
ಪುತ್ರರತ್ನರನೇಕರು
'ಹೆತ್ತವ್ವನ ದಿನ'ವೆಂದು ಹೊಗಳಿ
ಹೊನ್ನಶೂಲಕ್ಕೇರಿಸುವುದೆಂತಾ
ಮಾತೃಪ್ರೇಮ ಪರಿಹಾಸ...?
* * *

ಯಾವುದೇ ತಾಯಿ
ಬಾಯಿಲ್ಲದ ದೇವರಲ್ಲ,
ಎಲ್ಲರಂತೆ ಆಕೆಯೂ
ಮನುಷ್ಯಳೆನ್ನುವುದು ಸುಳ್ಳಲ್ಲ..
ಬೆಳೆದ ಮಕ್ಕಳಿಂದ
ಒಂದಿಷ್ಟು ಪ್ರೀತಿ ಗೌರವ
ಕಾಳಜಿ ಕಳಕಳಿ
ಹೊರತುಪಡಿಸಿ
ಹೆತ್ತವ್ವ ಇನ್ನೇನು
ಬಯಸೋದಿಲ್ಲ...
ಹೆತ್ತಮ್ಮನ ಈ ಹಿರಿದಾಸೆ
ಈಡೇರಿಸುವವರಿಗೆ ಪ್ರತಿದಿನವೂ
'ತಾಯಂದಿರ ದಿನವೇ'.....!
ತಾಯಿಯನ್ನು ತಬ್ಬಲಿ ಮಾಡಿ
'ತಾಯಂದಿರ ದಿನ'ವೆಂದು
ಸಂಭ್ರಮಿಸುವುದು ತರವೇ....?

- ಶಶಿ ಯಡಹಳ್ಳಿ

ಸಖಿ ಗೀತೆ....240

ಸಖಿ....

ಹೋಗಲಿ ಬಿಡು...
ವಂಚಕರ ಸಂಚಿಗೆಂದೂ
ಕೊನೆ ಎಂಬುದಿಲ್ಲ,
ನಂಬಿಕೆ ದ್ರೋಹಕ್ಕಿಂತ
ಪಾತಕ ಇನ್ನೊಂದಿಲ್ಲ....!

ಎಚ್ಚರದಿಂದಿರಬೇಕು...
ಉರಿವ ಮನೆ ಗಳ ಬಳಸಿ
ಉಯ್ಯಾಲೆ ಆಡುವವರುಂಟು,
ಸೂತಕದ ಮನ ಗುಡಿಸಿ
ಕಟ್ಟುತ್ತಾರೆ ಲಾಭದ ಗಂಟು....!!

ಗೊಂದಲದಲ್ಲಿದ್ದೇನೆ...
ಯಾರನ್ನ ನಂಬಬೇಕು
ನಂಬದಿರಬೇಕು,
ನಂಬಿದವರೇ ಬೆನ್ನಿಗಿರಿದಾಗ
ಇನ್ನಾರನ್ನು ನನ್ನವರೆನಬೇಕು....!!!

ಆದರೂ ಇದೆ ಭರವಸೆ...
ಇಂದಿಲ್ಲ ನಾಳೆ ಎಂದಾದರೊಂದಿನ
ನಂಬಿಗಸ್ತರು ಜೊತೆಯಾಗುತ್ತಾರೆ,
ಆಸೆಯ ತೀರವೇರಿ ಕಾಯುತ್ತಿರುವೆ
ಕೆಸರ ಕೊಳದೊಳಗೆ ಅರಳಬೇಕಿದೆ ತಾವರೆ....!!!!

-ಶಶಿ ಯಡಹಳ್ಳಿ

ಸಖಿ ಗೀತೆ..239

ಸಖಿ...

ಬದುಕು
ಇರುವುದೇ ಹೀಗೆ
ಅನುಕ್ಷಣ ಆಕ್ಷೇಪಿಸಿ
ಪ್ರಯೋಜನವಿಲ್ಲ.....!

ನೂರಾರು ನೋವುಗಳ
ಜಾತ್ರೆಯ ಕೊನೆಗೊಂದು ನಲಿವು....
ಸಾವಿರಾರು ಪ್ರಯತ್ನಗಳ
ಯಾತ್ರೆಯ ನಡುವೊಂದು ಒಲವು....

ಸಿಗಬಹುದೆಂಬ
ಆಸೆಯಲಿ ಘಾಸಿಗೊಂಡ
ಮನಸು ಕಾಯುವುದರಲ್ಲಿ
ಒಂಥರಾ ಸುಖವಿದೆ...!!

ಕಂಡ ಕನಸುಗಳಲಿ
ಒಂದಿಷ್ಟಾದರೂ ನನಸಾಗಲಿ
ಎನ್ನುವ ಬಯಕೆಯಲಿ
ಪ್ರಯತ್ನ ಜಾರಿಯಲ್ಲಿದೆ.....!!!

-ಯಡಹಳ್ಳಿ

ಸಖಿ ಗೀತೆ.... 238

ಸಖಿ...

ಸೋಲಿನ ವಿಷಯ ಬಿಡು
ಹುಟ್ಟಿನಿಂದ ಬೆನ್ನಿಗೆ
ಬೇತಾಳದಂತೆ 
ಗಂಟು ಬಿದ್ದಿದೆ....!

ಅಪರೂಪದ ಒಂದು
ಗೆಲುವು ಸಾವಿರ
ಸೋಲುಗಳ ನೋವು
ಮರೆಸಿದೆ....!!

ಈ ಸೋಲು ಗೆಲುವುಗಳ
ಕತ್ತಲ ಬೆಳಕಿನಾಟದಲಿ
ಪಾತ್ರ ನಾನು, ಸ್ಪೂರ್ತಿ ನೀನು
ಬದುಕು ಅರಳುತಿದೆ.....!!!

-ಯಡಹಳ್ಳಿ

ಸಖಿ ಗೀತೆ....237

ಸಖಿ...

ನಿನಗೇನು ಬೇಕೆಂದು
ಕೇಳಿ ತಿಳಿದು
ಕೊಡುವವರಿಗಿಂತ,
ಬೇಕೆಂಬುದೇನೆಂದು
ಅರಿತು ಕೊಡುವವರು
ಹೆಚ್ಚು ಪ್ರೀಯರು....!

ವಿನೋದದಾಳದ ವಿಷಾದ
ನಗೆಯೊಳಗಿನ ನೋವು
ಮಾತೊಳಗಿನ ಮೌನವನು
ಹೇಳದೇ ತಿಳಿದು
ಪರಿಹರಿಸುವವರು
ನಿಜವಾದ ದೇವರು....!!

ಹಸಿವಿಗೆ ತಿನಿಸಿ
ಮುನಿಸಿಗೆ ನಗಿಸಿ
ರೌದ್ರದಿ ರಮಿಸಿ
ಸಂಕಷ್ಟದಿ ಸಂತೈಸಿ
ಜೊತೆಯಾಗುವವರು
ಶಿವ ಶರಣರು....!!!

-ಯಡಹಳ್ಳಿ

ಸಖಿ ಗೀತೆ... 236

ಸಖಿ.....

ನಿಜ ಹೇಳು
ಎಲ್ಲರೂ
ಮನಸಾರೆ
ಪ್ರೀತಿಸುವುದು
ಏನನ್ನ ........?

ರೂಪ ಬಣ್ಣ
ಅಂತಸ್ತು ಹಣ,
ಜಾತಿ ಜಾತಕ
ವಯಸ್ಸು ಉದ್ಯೋಗ
ಮುಂತಾದವುಗಳನ್ನ....!

ಹುಡುಕುತ್ತಿದ್ದೇನೆ
ಮನುಷ್ಯರನ್ನ
ಮನುಷ್ಯರನ್ನಾಗಿ
ಪ್ರೀತಿಸಿ ಗೌರವಿಸುವ
ನಿಜ ಮನುಜರನ್ನ....!!!

-ಯಡಹಳ್ಳಿ

ಸಖಿ ಗೀತೆ....235

ಸಖಿ...

ಬದುಕಿನ
ಬಹುತೇಕ
ತಾಪತ್ರಯಗಳಿಗೆ
ಅಸಹನೆಯೇ
ಕಾರಣ....!

ಸಹನೆ
ಕಳೆದುಕೊಂಡ
ಮನುಜನ
ಬದುಕು ಬಲು
ದಾರುಣ....!!

ವೇದನೆ
ಕಾಮನೆ
ರೋಧನೆ
ಎಲ್ಲದಕ್ಕೂ ಇರಲಿ
ಸಹನೆ...!!!

ಸ್ವಾಭಿಮಾನಕ್ಕೆ
ಸವಾಲಾದರೆ
ಸಿಡಿದೇಳಲಿ
ಪ್ರತಿಶೋಧದ
ಭಾವನೆ.....!!!!

-ಯಡಹಳ್ಳಿ

ಸಖಿ ಗೀತೆ....234

ಸಖಿ...

ನನ್ನ ಮಗನ
ಕಣ್ಣಲ್ಲಿ
ಕಣ್ಣಿಟ್ಟಾಗೆಲ್ಲಾ
ನಾನು
ಕಳೆದುಕೊಂಡ
ಬಾಲ್ಯದ ನೆನಪು
ಹಚ್ಚುಹಸಿರಾಗಿ
ಕಾಡುತ್ತದೆ...

ಜೊತೆಗೆ ಈ
ಅಮಾನವೀಯ
ಬಂಡವಾಳಶಾಹಿ
ವ್ಯವಸ್ಥೆಯ ವ್ಯವಹಾರಿಕ
ಜಗತ್ತಿನಲ್ಲಿ ಮಗನ
ಮುಂದಿನ ಭವಿಷ್ಯದ
ಚಿಂತೆ ನಿಗಿನಿಗಿ
ಬೆಂಕಿಯಂತೆ
ಸುಡುತ್ತದೆ....!!

-ಯಡಹಳ್ಳಿ

ಸಖಿ ಗೀತೆ.... 233

ಸಖಿ...

ಕತ್ತಲ ಕಾಡ
ಹಾದಿಯಲಿ
ಕ್ರೂರ ಪ್ರಾಣಿಗಳ 
ವಿಪರೀತ ಕಾಟ,
ಸ್ವಲ್ಪ ಧೈರ್ಯವಿದ್ದರೆ
ಅದು ಹೇಗೋ
ಪಾರಾಗಬಹುದು....!

ಬೆಳಕಿನ ನಾಡ
ಹಾದಿಯಲಿ
ಹೆಜ್ಜೆ ಹೆಜ್ಜೆಗೆ ಸ್ವಾರ್ಥಿ
ಮನುಜರ ಮೋಸದಾಟ
ಎಷ್ಟೇ ಆತ್ಮಸ್ತೈರ್ಯವಿದ್ದರೂ
ಪಾರಾಗುವ
ಮಾರ್ಗ ಯಾವುದು....?

-ಯಡಹಳ್ಳಿ

ಸಖಿ ಗೀತೆ..232

ಸಖಿ....

ಆಡಬಾರದ
ಮಾತುಗಳು
ಮನದೊಳಗೆ
ಇರಲಿ ಬಿಡು...!

ಮೌನಕ್ಕಿಂತ ಮಾತು
ಸುಂದರವೆನಿಸಿದಾಗ
ಮನದ ಮಾತಿಗೆ
ಬಿಡುಗಡೆ ಕೊಡು...!!

ಉಚಿತವೆಂದು ಮಾತುಗಳು
ಬೇಕಾಬಿಟ್ಟಿ ಬಳಕೆಯಾಗದಿರಲಿ
ಖಚಿತವೆನಿಸಿದಾಗ ಶಬ್ದಗಳು
ಬಾಯಿಂದೀಚೆಗೆ ಬರಲಿ.....!!!

ಮಾತು ಬೆಳ್ಳಿ
ಮೌನ ಬಂಗಾರ
ಬಳಕೆಗೆ ಮಿತಿಯಿರಲಿ
ಮಾತಲ್ಲಿ ಹಿತವಿರಲಿ...!!!!

- ಯಡಹಳ್ಳಿ

ಹಚ್ಚಿಕೊಳ್ಳದಿರು

ಹಚ್ಚಿಕೊಳ್ಳದಿರು:

ಹಚ್ಚಿಕೊಳ್ಳದಿರು
ಮನವೇ ಹೆಚ್ಚಾಗಿ,
ಪ್ರೀತಿಸದಿರು
ತನುವ ಹುಚ್ಚಾಗಿ...

ಅಚ್ಚುಮೆಚ್ಚಿನವರೆಂದು
ನಂಬದಿರು ಕುರುಡಾಗಿ,
ಎಚ್ಚರ ತಪ್ಪಿದರಿಂದು
ವಂಚಿಪರು ಸವಿಮಾತಾಡಿ...

ಹರುಷ ಬಿತ್ತಿದರೂ
ಹತಾಷೆ ಬೆಳೆವುದು,
ವರುಷದ ಗೆಳೆತನ
ನಿಮಿಷದಿ ಮುರಿವುದು....

ಮನುಜ ಮನುಜರ
ನಡುವೆಲ್ಲಿದೆ ಅನುಬಂಧ...?
ಮಾತು ಮಾತಿಗೆ
ಹಳಸಿದೆ ಸಂಬಂಧ...!

ನಂಬಲಿಏನು
ನಂಬಲಿಹುದೇನು....?
ಸ್ವಾರ್ಥಸಾಧನೆ
ಮನದಲಿ ವೇದನೆ...!!

ಮನಸಿನ ಸುತ್ತ
ಸಂದೇಹದ ಹುತ್ತ...
ಹೀಗಾದರೆ ಹೇಗೆ
ಬದುಕುವುದೆತ್ತ....?

ಹಚ್ಚಿಕೊಳ್ಳದಿರು
ಮನವೇ ಹೆಚ್ಚಾಗಿ,
ಪ್ರೀತಿಸದಿರು
ತನುವ ಹುಚ್ಚಾಗಿ...

-ಯಡಹಳ್ಳಿ

ಸಖಿ ಗೀತೆ..... 231

ಸಖಿ...

ಗೊತ್ತಿದ್ದೋ
ಗೊತ್ತಿಲ್ಲದೆಯೋ
ಬೆಸೆದುಕೊಂಡ
ದಾಂಪತ್ಯದ
ರಕ್ಷಣೆಗೊಂದು
ಸುಲಭ ದಾರಿ
ಕಂಡುಕೊಂಡಿದ್ದೇನೆ...!

ಅದಕ್ಕಾಗಿ
ಪ್ರತಿದಿನ
ಪ್ರತಿಕ್ಷಣ
ರಾಜಿಯಾಗುತ್ತಾ
ಸ್ವಾತಂತ್ರ್ಯ
ಸ್ವಾಭಿಮಾನ
ಕೊಂದುಕೊಂಡಿದ್ದೇನೆ....!!\

-ಯಡಹಳ್ಳಿ

ಸಖಿ ಗೀತೆ..... 230

ಸಖಿ...

ಪ್ರತಿನಿತ್ಯದ
ಬದುಕಲಿ ಬರುವ
ಸಮಸ್ಯೆಗಳಾವವು
ಸಮಸ್ಯೆಗಳೇ ಅಲ್ಲ....!

ನಮ್ಮ ಸಾಮರ್ಥ್ಯ
ಸಾಬೀತುಪಡಿಸಲು
ಸಮಾಜ ಒಡ್ಡುವ
ಸವಾಲುಗಳು....!!

ಪಾಠ ಕಲಿಯಲು
ಕಲಿತು ಬೆಳೆಯಲು
ಬೆಳೆದು ಸಾಧಿಸಲು
ದೊರೆತ ಅವಕಾಶಗಳು....!!!

ತಾಪತ್ರಯಗಳಿಲ್ಲದ
ಬದುಕೇ ನೀರಸ,
ಇರಬೇಕು ಬಾಳಲಿ
ಸರಸ ವಿರಸ ಸಮರಸ.....!!!!

-ಯಡಹಳ್ಳಿ

ಸಖಿ ಗೀತೆ.... 229

ಸಖಿ...

ಬದುಕೊಂದು
ಸಮಸ್ಯೆಯಲ್ಲ
ಸದಾ ಚಿಂತಿಸಲು...!

ಅದು.... ಅದು...

ಸಾಧಕರಿಗೊಂದು
ಸವಾಲು
ಎದುರಿಸಿ ಗೆಲ್ಲಲು....!!

-ಯಡಹಳ್ಳಿ

ಸಖಿ ಗೀತೆ.... 228

ಸಖಿ...

ತಲೆಗಿಳಿದ ಅಕ್ಷರ
ದಾರಿದ್ರ್ಯದಲ್ಲೂ
ದಾರಿ ತೋರಿತು.....

ಎದೆಗಿಳಿದ ಬುದ್ದ
ಕಗ್ಗತ್ತಲಲ್ಲೂ
ಬೆಳಕ ಬೀರಿತು...

ಮನಕಿಳಿದ ಮಾರ್ಕ್ಸವಾದ
ಬದುಕಿಗೆ ನಿರ್ದಿಷ್ಟ
ಗೊತ್ತುಗುರಿ ಸಾರಿತು...

ಕೊನೆಗೂ....
ಕಾಡಿನ ಬಿದಿರೊಂದು
ಕೊಳಲಾಯಿತು.....!!!

-ಯಡಹಳ್ಳಿ

ಸಖಿ ಗೀತೆ.....227

ಸಖಿ...

ಪುಟ್ಟ ಮಗುವೊಂದು
ಗಟ್ಟಿಯಾಗಿ ಕೇಳಿತು
'ಹಣ್ಣು ಹೂ ನೆರಳ
ಕೊಡುವ ಮರವೇ
ಇದರಿಂದ ನಿನಗೇನು
ಲಾಭ ಸಿಕ್ಕೀತು....?
ಎಂಥಾ ಸುಖವದು
ದಕ್ಕೀತು....?'

''ಕಂದ ನಿನ್ನ ಮಾತು
ಬಲು ಚೆಂದ,
ಕೊಟ್ಟು
ತೆಗೆದುಕೊಳ್ಳುವುದು
ವ್ಯಾಪಾರ....

ಪ್ರತಿಫಲ ಬಯಸದೇ
ಕೊಡುವುದು
ಪರೋಪಕಾರ.....

ಪ್ರಯೋಜನ ಪಡೆದೂ
ವಿನಾಶ ಮಾಡುವುದು
ಮನುಷ್ಯರ ಮನೋವಿಕಾರ.....!''

ನೊಂದು ನುಡಿಯಿತು
ಚೆಂದದ ಮರ
ತಲೆತಗ್ಗಿಸಿತು
ಅಂದದ ಮಗು....!!

-ಯಡಹಳ್ಳಿ

ಸಖಿ ಗೀತೆ....226

ಸಖಿ....

''ಬಡತನವೇ
ಸಾಹಿತ್ಯದ
ಸಾರ್ವಭೌಮ ವಸ್ತು''
ಎಂದರು
ಬೇಂದ್ರೆ ಕವಿಗಳು....!

''ಸಾಹಿತ್ಯವೇ
ಶ್ರೀಮಂತಿಕೆ
ಪಡೆಯುವ ವಾಸ್ತು''
ಎನ್ನುತ್ತಿದ್ದಾರೆ ರಾಜಾಶ್ರಿತ
ರಾಜೀಕೋರ ಸಾಹಿತಿಗಳು....!!

-ಯಡಹಳ್ಳಿ

ಸಖಿ ಗೀತೆ.....225

ಸಖಿ....

ನಮ್ಮಿಬ್ಬರ
ನಡುವಿರುವ
ಸವಿ ನೆನಪುಗಳ
ಕಾಪಿಟ್ಟುಕೊಳ್ಳೋಣ...

ಪರಸ್ಪರ
ಸಂಬಂಧದೊಳಗೆ
ಒಂದಿಷ್ಟಂತರ
ಕಾಯ್ದಿಟ್ಟುಕೊಳ್ಳೋಣ...

ಹತ್ತಿರವಾದಷ್ಟೂ
ಮುಚ್ಚಿಟ್ಟುಕೊಂಡ
ಗುಟ್ಟುಗಳೆಲ್ಲಾ
ಬಿಚ್ಚಿಟ್ಟು ಕೊಳ್ಳುತ್ತವೆ...

ಬೆತ್ತಲಾದಷ್ಟೂ
ಬಟಾಬಯಲು
ನಗ್ನಸತ್ಯಗಳೆಲ್ಲಾ
ತೆರೆದುಕೊಳ್ಳುತ್ತವೆ....

ದೇಹಗಳೆರಡು
ಜೊತೆಯಾದಷ್ಟೂ
ಮನಸುಗಳು
ದೂರಾಗದಿರಲಿ..

ಎರಡೂ ತೀರಗಳ
ನಡುವಿರಲಿ ಅಂತರ,
ಒಲವಿನ ನದಿ
ಹರಿಯುತಲಿರಲಿ ನಿರಂತರ.....!!!

-ಯಡಹಳ್ಳಿ

ಸಖಿ ಗೀತೆ.... 224

ತರಲೆ ಕಾವ್ಯ.....!!

ಸಖಿ.....

ಅಪ್ಪನ ತಲೆಯಲಿ
ಬೆಳ್ಳಿ ಕೂದಲ ಕಂಡು
ಬೆರಗಾಗಿ ಕೇಳಿತು ಕಂದಾ
"ಅಪ್ಪಾ ಅಪ್ಪಾ
ಕಪ್ಪು ತಲೆಯಲಿ
ಬಿಳಿ ಕೂದಲು ಯಾಕಪ್ಪಾ?.."

"ಅಯ್ಯೋ ಕಂದಾ
ನೀನೀಗ ಹುಸಿಯಾಡುವುದು
ಕಲಿತಿರುವೆ
ಮಗ ಹೇಳುವ ಪ್ರತಿ
ಸುಳ್ಳಿಗೊಂದೊಂದು ಅಪ್ಪನ
ಕೂದಲು ನೆರೆಯುವುದು.."

ಅಪ್ಪನ ಮಾತು ಕೇಳಿದ
ಕಂದ ಕೌತುಕದಿಂದ
ಪ್ರಶ್ನಿಸಿತು....
"ಹೌದಾ ಅಪ್ಪಾ
ಗೊತ್ತಾಯ್ತು ಈಗ
ತಾತನ ತಲೆಯಾಕೆ
ಪೂರ್ತಿ ಬೆಳ್ಳಗೆ..
ಹಾಗಾದರೆ ಹೇಳು
ನೀನೆಷ್ಟೊಂದು ಸುಳ್ಳು
ಹೇಳಿರುವೆ...."

ಬೆಪ್ಪಾದ ಅಪ್ಪನ
ಬಾಯಿ ಕಟ್ಟಿತು,
ಬೊಚ್ಚುಬಾಯಿಯ ಅಜ್ಜ
ಮುಸಿಮುಸಿ ನಕ್ಕಿತು...

ಮಕ್ಕಳ ಮುಂದೆ
ಅತಿಜಾಣತನ ಸಲ್ಲದು
ಎಂಬುದೇ ಈ ತರಲೆ
ಕವಿತೆಯ ಅರ್ಥವು.....!!!

-ಯಡಹಳ್ಳಿ

ಸಖಿ ಗೀತೆ....223

ಸಖಿ.....

ಮನುಜನ
ಬದುಕು
ಕೊನೆಯಾಗುವುದು
ಸತ್ತಾಗೆಂಬುದು
ಮಿತ್ಯ....!

ಆತ್ಮಸಾಕ್ಷಿ
ಮಾರಿಕೊಂಡ ಮನುಷ್ಯ
ಬದುಕಿದ್ದರೂ
ಸತ್ತಂತೆನ್ನುವುದು
ಸೂರ್ಯ ಸತ್ಯ.....!!

ಬದುಕಿದ್ದಾಗಲೇ
ಮೌಲ್ಯ ಕಳೆದುಕೊಂಡು
ಸಾಯುವುದಕ್ಕಿಂತ...
ಮರಣದ ನಂತರ
ಜನಮಾನಸದಲ್ಲಿ
ನೆಲೆಸುವವನೇ ಸಂತ....

-ಯಡಹಳ್ಳಿ

ಸಖಿ ಗೀತೆ.....222

ಸಖಿ..

ಪಡೆವ
ಉಪಕಾರಕ್ಕೆ
ಪ್ರತ್ಯುಪಕಾರ
ಮಾಡಲಾರೆಯಾದರೆ
ಸಹಾಯ ಬೇಡಬೇಡ
ಸಹಕಾರ ಕೇಳಬೇಡ.....!

ಕೊಡುವುದನ್ನು
ಮರೆತು
ಪಡೆಯುವುದನ್ನೇ
ಕಾಯಕ ಮಾಡಿಕೊಂಡರೆ
ಮತ್ತೆ ಮತ್ತೆ ನಿರೀಕ್ಷೆ
ಮಾಡಬೇಡ ಕೊನೆಗೆ
ನಿರಾಸೆಯಾಗಬೇಡ.....!!

ಕೊಟ್ಟು ಪಡೆಯದ
ಸಂಬಂಧಗಳೆಂದೂ
ಗಟ್ಟಿಯಾಗೋದಿಲ್ಲ...
ಗಾಢ ಗೆಳೆತನ
ನೆಟ್ಟಗಿರೋದಿಲ್ಲ...
ಸ್ವಾರ್ಥಿಗಳ ಸಹವಾಸ
ಮೂರ್ಖರ ಕೆಲಸ........!!!

ಕೊಟ್ಟು ಕೊಟ್ಟು
ಸಾಕಾಯ್ತು
ಇರಲಿ ಅಂತರ.....
ಮರಳಿ ಪಡೆವ
ಆಸೆಗಿಲ್ಲ ಇನಿತು
ಕಾತುರ......
ಭ್ರಮೆ ಕಳೆದು
ಹುಟ್ಟಿತೀಗ
ಹೊಸ ಮನ್ವಂತರ....

-ಯಡಹಳ್ಳಿ

ಸಖಿ ಗೀತೆ....221

ಸಖಿ...

ಅನುಭವ
ಗ್ರಹಿಸುತ್ತಾ
ಅನುಭಾವ
ಗಳಿಸುತ್ತಾ
ಅಂಧಕಾರದಲಿ
ಬೆಳಕ ಹಂಚುತ್ತಾ
ಶತಮಾನಗಳಿಂದ
ಸಾಗಿ ಬಂದನವ ಬುದ್ದ....!!

ಬೆಳಕಿಗೆ ಕುರುಡಾಗಿ
ಕತ್ತಲೆಯೇ ಬದುಕಾಗಿ
ಕಾಲಚಕ್ರದಲಿ ಕನಲಿದ
ಮನುಜನ ಬದುಕೊಂದು ಯುದ್ಧ....!!!

-ಯಡಹಳ್ಳಿ

ಸಖಿ ಗೀತೆ...220

ಸಖಿ...

ನೆನಪಿನ
ಹಾದಿಯಲಿ
ಅದೆಷ್ಟೋ
ಹೆಜ್ಜೆ ಗುರುತುಗಳು..

ಬಹುತೇಕ
ಅಗೋಚರ,
ಕೆಲವು ಮಾತ್ರ
ಸ್ಥಾವರ....

ಹೆಜ್ಜೆ ಹೆಜ್ಜೆಗೂ
ಅಳುಕುವ
ಮಾಯದ
ಗಾಯಗಳಿವೆ....

ಕಂಡಾಗೊಮ್ಮೆ
ನೋವ ನೆನಪಿಸುವ
ಮಾದ ಗಾಯದ
ಗುರುತುಗಳಿವೆ..

ಭೂತಕಾಲದ
ಬಳುವಳಿ
ಬರೀ ದಿಗಿಲು...

ವರ್ತಮಾನದ
ಬದುಕು ಬವನೆಯ
ಕಡಲು...

ಭವಿಷ್ಯವನ್ನು
ಕಟ್ಟಿಕೊಳ್ಳುವುದೇ
ನಿತ್ಯದ ಸವಾಲು....!!!

-ಯಡಹಳ್ಳಿ

ಸಖಿ ಗೀತೆ... 219

ಸಖಿ...

ಕಾಡತಾವ
ನೆನಪ ಬಳ್ಳಿ,
ಮುಚ್ಚಿದರೆ
ಕಣ್ಮುಂದೆ
ನನ್ನದೇ ಹಳ್ಳಿ.....

ಆ ದಿನಗಳಲಿ
ಅನುಕೂಲಗಳಿರಲಿಲ್ಲ,
ಬದುಕು
ಹಸನಾಗಿತ್ತು....
ಸಂಬಂಧ
ಹಸಿರಾಗಿತ್ತು...

ಓಟಿನ ರಾಜಕೀಯ
ಹಳ್ಳಿ ತುಂಬ ಹರದಾಡಿ
ಬಲವಾಗಿ ಬೀಸಿತು
ಆಧುನಿಕತೆಯ ಗಾಳಿ....

ಈಗಲೂ ಹಳ್ಳಿಯಿದೆ
ಆಗಿನಂತಿಲ್ಲ,
ಗುಟ್ಕಾ ಮಟ್ಕಾ ಅಮಲು
ಅವಿಧೇಯತೆಯ ಗಮಲು
ಊರಲ್ಲೆಲ್ಲಾ ಹುಡುಕಿದರೂ
ಇಲ್ಲ ನೆಮ್ಮದಿ ಬರೀ ದಿಗಿಲು...

ಎಲ್ಲೆಂದರಲ್ಲಿ
ಮನೆ ಮನಗಳಲಿ
ಕಿತ್ತು ಬಿದ್ದಿವೆ
ಕರುಳ ಬಳ್ಳಿ,
ಹೇಗೆಕಾಯ್ತು ನಾ
ಪ್ರೀತಿಸಿದ ಹಳ್ಳಿ.....!!

-ಯಡಹಳ್ಳಿ

ಸಖಿ ಗೀತೆ... 218

ಸಖಿ....

ಮನದ
ಮುಂದನ
ಆಸೆಗೆ
ಮಿತಿಯಿಲ್ಲ....!

ಹಾಗಂತ
ಬಯಸಿದ್ದೆಲ್ಲಾ
ಬೇಕೆನ್ನುವುದು
ಸೂಕ್ತವಲ್ಲ.....!!

ಸಹಸ್ರಾರು
ದುಡಿಯುವ
ಜನರ ಋಣ
ನಮ್ಮ ಮೇಲಿದೆ....

ಅಗತ್ಯವಿರುವಷ್ಟೇ
ಸಂಪನ್ಮೂಲ
ಬಳಕೆ ನಮ್ಮ
ಬದುಕಾಗಬೇಕಿದೆ.....!!!

-ಯಡಹಳ್ಳಿ

ಸಖಿ ಗೀತೆ.... 217

ಸಖಿ...
ಇಂದು

ಮೇ ಒಂದು
ವಿಶ್ವ ಕಾರ್ಮಿಕರ
ದಿನಾಚರಣೆ....

ಅಂದು
ಚಿಕಾಗೋದಲ್ಲಿ
ಕಾರ್ಮಿಕರು
ರಕ್ತ ಚೆಲ್ಲಿ
ಕನಿಷ್ಠ ವೇತನ
ಕೆಲಸದವಧಿ
ಪಡೆದುಕೊಂಡರು...

ಆ ನೆನಪನ್ನು
ಪ್ರತಿ ವರ್ಷ ಈ ದಿನ
ಹಂಚಿಕೊಳ್ಳುವರು...

ಹಗಲು ಇರುಳು
ಮನೆ ಒಳಹೊರಗೆ
ದುಡಿಯುವ
ಮಹಿಳೆಯರೇನು
ಕಾರ್ಮಿಕರಲ್ಲವೇನು..?
ದೇಶ ಯಾವುದಾದರೇನು
ಮಹಿಳೆ ನಿರಂತರ
ದುಡಿಯುತಿಲ್ಲವೇನು...?

ಮಾನಿನಿಯರ
ದುಡಿತಕ್ಕೆ
ಕಾಲಮಿತಿಯೆಲ್ಲಿ...?
ಮಹಿಳೆಯರ
ಮನೆಗೆಲಸಕ್ಕೆ
ಪ್ರತಿಫಲವೆಲ್ಲಿ...?
ಕನಿಷ್ಠ ಗೌರವವೂ
ಸಿಗದಾಗಿದೆ
ಈ ಪುರುಷ ಲೋಕದಲ್ಲಿ...?

-ಯಡಹಳ್ಳಿ

ಸಖೀ ಗೀತೆ... 216

ಸಖಿ....

ಆಹಾರದ
ವಿಷಯದಲಿ
ಅಹಿಂಸೆ
ಎನ್ನುವುದು
ಹೊಟ್ಟೆ ತುಂಬಿದರ
ಅಹವಾಲು....!

ಹಸಿವೆಗಿಂತ
ಹಿರಿದಾದ
ಹಿಂಸೆ
ಜಗದಲಿ
ಮತ್ತೇನಿದೆ
ಹೇಳು....!!

ಹಿಂಸೆ ಅಹಿಂಸೆಗಳ
ಸಂಘರ್ಷದಲಿ
ಹಸಿದ ಬಡಜನರಿಗೆ
ಬದುಕುವುದೇ
ಬಲು ದೊಡ್ಡ
ಸವಾಲು....!!!

-ಯಡಹಳ್ಳಿ

ಸಖಿ ಗೀತೆ.....215

ಸಖಿ...

ದಾಂಪತ್ಯ
ಹಳೆಯದಾದಂತೆ
ಬದುಕೊಂದು
ಚಿತ್ತ ಪಟ್ಟ ಆಟ...!

ಗಂಡ ಹೆಂಡತಿ ಎಂಬೋ
ನಾಣ್ಯದ ಎರಡು
ಮುಖಗಳಲಿ
ಆಕೆ ಚಿತ್ತಾದರೆ
ಆತ ಪಟ್ಟಾ...
ಆತ ಚಿತ್ತಾದರೆ
ಆಕೆ ಪಟ್ಟಾ......!!

ಈ ಚಿತ್ತ ಪಟ್ಟ
ಮುಖಗಳೆಂದೂ
ಮುಖಾಮುಖಿಯಾಗದಿದ್ದರೂ
ಜೊತೆಯಾಗಿದ್ದರೆ ಬೆಲೆ....

ವೈರುದ್ಯಗಳ
ನಡುವೆ
ಬಾಳುವುದರಲ್ಲಿದೆ
ದಾಂಪತ್ಯದ ನೆಲೆ...!!!

-ಯಡಹಳ್ಳಿ
( ನಾಣ್ಯದ head & tail ಗೆ ಉತ್ತರ ಕರ್ನಾಟಕದಲ್ಲಿ ಚಿತ್ತ ಪಟ್ಟ ಎನ್ನುತ್ತಾರೆ )

ಸಖಿ ಗೀತೆ... 214

ಸಖಿ...

ಕಾಡಿನಲ್ಲಿ
ಹುಲಿಗಳು
ಜಿಂಕೆಗಳ
ಬೇಟೆಯಾಡುವುದು
ಮಾಮೂಲು....!

ಆದರೆ...

ನಾಡಿನಲ್ಲಿ
ಪುರುಷ ವ್ಯಾಘ್ರಗಳು
ಸುಂದರ ಹೆಣ್ಣು
ಜಿಂಕೆಗಳ ಕಣ್ಣೋಟಕ್ಕೆ
ಮರುಳಾಗಿ
ಶರಣಾಗುವುದೇ
ಭಾರೀ ಕಮಾಲು....!!

-ಯಡಹಳ್ಳಿ

ಸಖಿ ಗೀತೆ.... 213

ಸಖಿ...

'ತಪ್ಪಾದಾಗ
ವಾದಿಸದೇ
ಒಪ್ಪಿಕೋ...

ಸರಿ ಇದ್ದಾಗಲೂ
ಸಾಧಿಸದೇ
ತೆಪ್ಪಗಿರು....'

ಇದೇ ನನ್ನ
ಸುಖೀ ದಾಂಪತ್ಯದ
ಸ್ವಾರಸ್ಯ...!

ಹೊಂದಾಣಿಕೆಯೇ
ಸುದೀರ್ಘ ಬಾಳಿನ
ರಹಸ್ಯ.......!!

-ಯಡಹಳ್ಳಿ

ಸಖಿ ಗೀತೆ....212

ಸಖಿ....

ಈ ಕಾಲದ
ಮಕ್ಕಳು
ಮುಗ್ದರೆನ್ನುವುದು
ಶುದ್ದ ಸುಳ್ಳು....

ಎಲ್ಲ ಬಲ್ಲರವರು
ದೊಡ್ಡವರಿಗೆ
ಹೇಳುತ್ತಾರೆ
ಪಾಠ...

ಮನೆಯೆ ಮೊದಲ
ಪಾಠ ಶಾಲೆ
ತಾಯಿ ಮೊದಲ ಗುರು
ಎನ್ನುವುದೂ ನಿಜವಲ್ಲ...!!

ಟಿವಿ ಎಂಬುದೀಗ
ತಂದೆ ತಾಯಿ ಗುರು ಎಲ್ಲಾ,
ಭ್ರಮಾಲೋಕದ ಹೊರತು
ಮಕ್ಕಳಿಗೇನೂ ಬೇಕಿಲ್ಲ.....!!!

-ಯಡಹಳ್ಳಿ

ಸಖಿ ಗೀತೆ..... 211

ಸಖಿ...

ಕಥನ ತಂತ್ರ
ಛೂ ಮಂತ್ರ...
ಹೊಸ ದೃಷ್ಟಿಯಲ್ಲಿ
ಪಾತ್ರ ಸೃಷ್ಟಿ...

ವಾಕ್ಯ ಕಟ್ಟುವ ಕಲೆ
ಮಾರ್ಮಿಕ ಮಾತಿನ ಬಲೆ...
ವಿಶಿಷ್ಟ ನಿರೂಪಣೆ
ವಿಶೇಷ ನಿರ್ವಹಣೆ.....

ಇಷ್ಟಿದ್ದರೆ ಸಾಕೆ
ಕಥೆ ಕಟ್ಟಲು...
ಆಂತರಿಕ ಸ್ಪೂರ್ಥಿಯೂ
ಬೇಕಲ್ಲವೆ ಕಥೆ ಹುಟ್ಟಲು....!!

-ಯಡಹಳ್ಳಿ

ಸಖಿ ಗೀತೆ.... 210

ಸಖಿ...

ಅಂತರಂಗದ
ಆಳದಿಂದ
ಶಿಥಿಲಗೊಂಡ
ಸಂಬಂಧವನ್ನೆತ್ತಿ
ಬಿಸಾಡುವುದು
ಅದೆಷ್ಟು ಕಷ್ಟಸಾಧ್ಯ..!

ಮೆದುಳಿನ
ತಳದಿಂದ
ನೋವುಂಡ
ನೆನಪುಗಳ ಹೆಕ್ಕಿ
ತೊಲಗಿಸುವುದು
ಯಾವತ್ತೂ ಅಸಾದ್ಯ...!!

ಆದರೂ
ಪ್ರಯತ್ನ
ಜಾರಿಯಲ್ಲಿದೆ,
ಪರ್ಯಾಯ
ಮಾರ್ಗಾಣ್ವೇಷಣೆಯಲ್ಲಿ
ವಿಮೋಚನೆ ಇದೆ....!!!

-ಯಡಹಳ್ಳಿ

ಸಖಿ ಗೀತೆ.... 209

ಸಖಿ...

ಹೆಣ್ಣು ಗಂಡು
ಪ್ರೀತಿಸುವುದು
ಮದುವೆಯಾಗುವುದು
ಆಮೇಲಿನ ಮಾತು.....!

ಮೊದಲು
ಪರಸ್ಪರ
ಗೌರವಿಸುವ
ಮನಸು
ಹೊಂದಾಣಿಕೆಯ
ಸೊಗಸು
ಆಗಬೇಕಿದೆ ಸಾಬೀತು....!!

-ಯಡಹಳ್ಳಿ

ಸಖಿ ಗೀತೆ...208

ಸಖಿ...

ಮುಂದೊಮ್ಮೆ ತಿನ್ನುವ
ಅನ್ನ ಮಾರುತ್ತಾರೆಂಬ
ಮುತ್ತಾತನ ಮಾತು
ನಿಜವಾಯ್ತು, ಆಹಾರ
ಊರು ಕೇರಿಗಳ
ಗಲ್ಲಿಗಲ್ಲಿಗಳಲಿ
ಮಾರಾಟದ
ಸರಕಾಯಿತು....!

ಮುಂದಿನ ದಿನಮಾನ
ಕುಡಿಯುವ ನೀರಿಗೂ
ಕಾಸು ಕೊಡಬೇಕೆನ್ನುವ
ತಾತನ ಮಾತೂ
ವಾಸ್ತವವಾಯ್ತು, ಈಗ
ಎಲ್ಲಿ ನೋಡಿದರಲ್ಲಿ
ಬಿಕರಿಯಾಗುವ ನೀರು
ಲಾಭಕೋರರ
ದಂದೆಯಾಯಿತು......!!

ಮುಂಬರುವ ಕಾಲದಲಿ
'ಉಸಿರಾಡುವ ಗಾಳಿಗೂ
ತೆರಬೇಕಿದೆ ತೆರಿಗೆ' ಎಂದು
ಅಪ್ಪ ಹೇಳುತ್ತಿದ್ದಾನೆ.
ಈ ಮಾತೊಂದಾದರೂ
ಸುಳ್ಳಾಗಲೆಂದು
ಇಲ್ಲದ ದೇವರಲ್ಲಿ
ಪ್ರಾರ್ಥಿಸುತ್ತಿದ್ದೇನೆ,
ಹುಸಿಹೋಗಲಾರದೆಂದು
ಪರಿತಪಿಸುತ್ತಿದ್ದೇನೆ....!!!

-ಯಡಹಳ್ಳಿ

ಸಖಿ ಗೀತೆ....207

ಸಖಿ..

ಮನದ
ಮಾತಿನ
ಸಂವಹನಕ್ಕೆ
ಶಬ್ದಗಳೇ
ಬೇಕಂತೇನಿಲ್ಲ.....!

ಕಣ್ಣಲ್ಲಿ ಕಣ್ಣಿಟ್ಟು
ಮನಮನಸಿಗೆ
ಭಾವಗಳ
ಸೇತುವೆ
ಕಟ್ಟಿದರೆ ಸಾಕಲ್ಲ...!!

ಶಬ್ಬಗಳಲ್ಲೇನಿದೆ
ಬರೀ ಪ್ರಾರಬ್ಧ...
ನಿಶ್ಯಬ್ದದಲಿ ನಗುತ
ಎಲ್ಲ ಪ್ರೀತಿಸುವವನೇ
ನಿಜ ಬುದ್ದ.......!!!

-ಯಡಹಳ್ಳಿ

ಸಖಿ ಗೀತೆ.....206



 ಸಖಿ...

ನಾನು
ಬರೆದಿದ್ದೆಲ್ಲಾ
ಕವಿತೆಯಲ್ಲಾ...

ಕವಿತೆ ಅಂತ
ಅಂದುಕೊಂಡರೆ
ನನಗೇನೂ
ಅಭ್ಯಂತರವಿಲ್ಲ....!

ಅನ್ನಿಸಿದ್ದನ್ನ
ಅನುಭವಕ್ಕೆ
ದಕ್ಕಿದ್ದನ್ನ
ಸರಳಾತಿಸರಳ
ಪದಗಳಲ್ಲಿ
ಬರೆದಿದ್ದನ್ನ
ಕವಿತೆ ಎಂದು
ಆರೋಪಿಸಿದರೆ
ಬೇಸರವೇನಿಲ್ಲ.....!!

-ಯಡಹಳ್ಳಿ