ಗುರುವಾರ, ಜೂನ್ 11, 2015

ಸಖಿ ಗೀತೆ......346

ಸಖಿ....

ಯಾರು ಏನೇ ಹೇಳಲಿ
ದೇವರೆಂಬೋ ಕಲ್ಪನೆಯೇ ಅಪೂರ್ಣ...
ಇಲ್ಲೀವರೆಗೂ ಯಾರಿಗೂ
ದಕ್ಕಿಲ್ಲ ದೇವರು ಸಂಪೂರ್ಣ...

ಅವರವರ ಭಾವ ಬಕುತಿಗೆ
ನಂಬಿಕೆ ಆಚರಣೆ ಆಕಾಂಕ್ಷೆಗೆ
ತಕ್ಕಂತೆ ದೇವರ ರೂಪಕ..
ತಾತ್ಕಾಲಿಕ ಬದುಕಿನಲಿ ಎಲ್ಲವೂ
ಖಾಯಂ ಆಗಿ ಬೇಕೆನ್ನುವವರ
ಬಯಕೆಯ ಪ್ರತೀಕ....

ಇದ್ದಾನೆ ಇಲ್ಲ ಎಂಬುವವರಾರೂ ಕಂಡಿಲ್ಲ,
ದೇವರಿನ್ನೂ ಯಾರ ಕಣ್ಣಿಗೂ ಬಿದ್ದಿಲ್ಲ..
ಇರಬಹುದು ಇಲ್ಲದಿರಬಹುದೆಂಬ
ಊಹಾಪೋಹಗಳಿಗಂತೂ ಕೊನೆಮೊದಲಿಲ್ಲ...

ಕುರುಡರು ಆನೆ ಮುಟ್ಟಿದಂತೆ
ಅವರವರ ಅನುಭವಕ್ಕೆ ದಕ್ಕಿದಷ್ಟು ವಿವರಣೆ...
ಆಸ್ತಿಕರಿಂದ ನಿತ್ಯ ಪೂಜಾರಾಧನೆ
ನಾಸ್ತಿಕರಿಂದ ಎಲ್ಲಾ ನಿರಾಕರಣೆ.....

ಮೂರ್ತರೂಪಕ್ಕಿರುವ ತರ್ಕಬದ್ಧತೆ
ಅಮೂರ್ತದ ವ್ಯಾಖ್ಯಾನಕ್ಕೆಲ್ಲಿ....?
ಭೌತಿಕ ಪ್ರಪಂಚದ ಪರಿಕಲ್ಪನೆಗೆ
ತಾರ್ಕಿಕ ನೆಲೆಯೆಲ್ಲಿ ಭಾವಲೋಕದಲ್ಲಿ...?

ಇಂದ್ರೀಯಗಳಿಗೆ ದಕ್ಕಿದ್ದನ್ನು
ವಾದಿಸಬಹುದು ಸಾಧಿಸಬಹುದು...
ಅಗೋಚರ ಅತೀಂದ್ರೀಯ ಅನುಭೂತಿಯನ್ನು
ಹಾಗೂ ಹೀಗೂ ಊಹಿಸಬಹುದು....

ಮನಸುಗಳ ಬೆಸೆಯುವುದಿದ್ದರೆ
ಇದ್ದರಿರಲಿ ಬಿಡು ದೇವರು ತನ್ನ ಪಾಡಿಗೆ...
ಮನಸುಗಳ ಒಡೆಯುವುದಿದ್ದರೆ
ಕಳಿಸಿಬಿಡು ಎಲ್ಲಾ ದೇವರ ಕಾಡಿಗೆ....

ಎಲ್ಲಾ ವಾದಗಳನು ಗೆಲ್ಲಲೇಬೇಕೆಂದೇನಿಲ್ಲ,
ನಿಖರವಾಗಿ ಗೊತ್ತಿಲ್ಲದರ ಕುರಿತು
ಬದುಕು ಪೂರಾ ವಾದಿಸುವ ಬದಲು...
ಪರಸ್ಪರ ನಂಬಿಕೆಗಳನು ಗೌರವಿಸಿ
ಅಪನಂಬಿಕೆಗಳನು ನಿರ್ಲಕ್ಷಿಸಿದರೆ
ಬಗೆಹರಿದೀತು ದಿಗಿಲು......

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ