ಬುಧವಾರ, ಜೂನ್ 10, 2015

ಸಖಿ ಗೀತೆ....316

ಸಖಿ...

ವಿಪರ್ಯಾಸವೆಂದರೆ ಹೀಗೆ...

ಕೂಲಿ ಕಾರ್ಮಿಕರ
ಹಕ್ಕುಗಳಿಗಾಗಿ
ಹೋರಾಡುವ
ಕ್ರಾಂತಿಕಾರಿ ನಾಯಕ
ಸ್ವಂತಕ್ಕೊಂದು ಮನೆ
ಕಟ್ಟಿಸಲಾರಂಭಿಸಿದ...

ಮನೆ ಕಟ್ಟುವುದು
ಮುಗಿಯುವುದರೊಳಗಾಗಿ
ಕಾರ್ಮಿಕರ ಕಾಟಕ್ಕೆ
ರೋಸಿಹೋಗಿ
ಕೂಲಿ ಕಾರ್ಮಿಕರ
ವಿರೋಧಿಯಾದ...

ಮಹಿಳಾಪರ ನಿಲುವಿನ
ಪ್ರಗತಿಪರ ಯುವಕ
ಕೊನೆಗೂ ಮದುವೆಯಾದ...
ಸಂಗಾತಿಗೆ ಸಮಾನತೆ ಕೊಟ್ಟ
ಸ್ವತಂತ್ರವಾಗಿ ಬಿಟ್ಟ, ಕೊನೆಗೂ
ಶೋಷಣೆಗೊಳಗಾಗಿ ಕಂಗೆಟ್ಟ....

ಬಂದವಳು ತಂದೇ
ಆಗಬೇಕೆಂದಳು..
ಮಾತಿಗೆ ಮಾತು,
ವಾದಕ್ಕೆ ಪ್ರತಿವಾದ....
ಹರಿಣವೊಂದು ಹುಲಿ
ಪಳಗಿಸುವ ಪರಿ ಕಂಡು
ಮಹಿಳಾ ವಿರೋಧಿಯಾದ...

ಸೆಳುವಿಗೆ ಸಿಕ್ಕವನಿಗೆ
ಗೊತ್ತು ಸುಳಿಯ ತಾಕತ್ತು..
ಚಕ್ರವ್ಯೂಹ ಹೊಕ್ಕವನಿಗೆ
ಗೊತ್ತು ಶಡ್ಯಂತ್ರಗಳ ಮಸಲತ್ತು...
ತೀರದಿನಿಂತು ಸಾಗರ ನೋಡುಗನಿಗೇನು
ಗೊತ್ತು ಅದರಾಳದ ಹಿಕಮತ್ತು...

ಭಾಷಣಕ್ಕೂ ಬದುಕಿಗೂ
ಭಾರೀ ಅಂತರವಿದೆ..
ಆಶಯಕ್ಕೂ ಮೀರಿದ
ಅತಿಶಯ ಬದುಕಲ್ಲಿದೆ....
ಹೋರಾಟ ಕ್ರಾಂತಿಗಳು
ಕಲಿಸದಂತ ಪಾಠ
ಬದುಕು ಕಲಿಸುತ್ತದೆ....

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ