ಬುಧವಾರ, ಜೂನ್ 10, 2015

ಸಖಿ ಗೀತೆ.....326

ಸಖಿ...

ಜಾಗ ಸಿಕ್ಕಲ್ಲಿ
ಬೇರೂರಿ...
ಹಾಸಿಗೆ ಇದ್ದಷ್ಟು
ಕಾಲೂರಿ..
ಬದುಕು ಸವೆಸುವ
ನಾನೆಲ್ಲಿ....

ಆಗಸದಂಗಳದಿ
ಮನಸೂರಿ...
ಕನಸ ರೆಕ್ಕೆ
ಬಿಚ್ಚಿ ಹಾರಿ...
ಭ್ರಮೆಯಲ್ಲಿ ವಿಹರಿಪ
ನೀನೆಲ್ಲಿ...

ಭುವಿಗೂ ಭಾನಿಗೂ
ಎಷ್ಟೊಂದು ಅಂತರ...
ಒಂದಕ್ಕೊಂದು ಸೇರಲೆಂದೂ
ತೋರಬಾರದು ಕಾತುರ..

ಭೂಮಿ ತಲೆ ಎತ್ತಿ ನೋಡಬೇಕು
ಆಗಸ ತಲೆ ತಗ್ಗಿಸಿ ಕಾಣಬೇಕು ..
ಆಗಲಾದರೂ ನೋಟ ಬೆರೆಯಬಹುದು
ಮನದಲಿ ಹೂದೋಟ ಅರಳಬಹುದು...

ಆಗುವುದಿದ್ದರೆ ಆಗಲಿ ಬಿಡು
ಸಮವಯಸ್ಕರಲ್ಲಿ ಸ್ನೇಹ
ಸಮಾನ ಮನಸ್ಕರಲ್ಲಿ ಪ್ರೇಮ..
ಮೀರುವುದೇಗೆ ಭೂ-ಗಗನ ತಾರತಮ್ಯ

ಮನುಷ್ಯ ನಾನು... ಬೇರಿದೆ
ಭೂಮಿಯಲಿ, ಆಸೆ ಆಗಸದಲಿ...
ದೇವತೆ ನೀನು... ಬೇರಿಲ್ಲ ಭುವಿಯಿಲ್ಲ
ಪರಸ್ಪರ ಪ್ರೀತಿ ಪ್ರೇಮ ಹುಟ್ಟುವುದೇನು

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ