ಬುಧವಾರ, ಜೂನ್ 10, 2015

ಸಖಿ ಗೀತೆ......336

ಸಖಿ...

ಸಾಗರದಂತೆ
ನಮ್ಮ ಬದುಕು,
ಅದರಲೇ 
ಸಾರ್ಥಕತೆ ಹುಡುಕು....

ಎಲ್ಲರಿಗೂ ಎಲ್ಲವೂ
ಸಿಕ್ಕುವುದಿಲ್ಲ,
ಬಾಳೆಂಬ ಸಾಗರ
ಯಾರೊಬ್ಬರ ಸ್ವತ್ತಲ್ಲ....

ಹಲವರಿಗೆ ಉಪ್ಪು
ಕೆಲವರಿಗೆ ಚಿಪ್ಪು...
ಬಲೆಬೀಸಿ ಹಿಡಿದವರ
ಪಾಲಿಗಿದೆ ಮತ್ಸ್ಯ ಸಂಪತ್ತು..
ಆಳಕ್ಕಿಳಿದು ತಡಕಿದರೆ
ಸಿಗಬಹುದು ಕಡಲ ಮುತ್ತು....

ಅವಕಾಶಕ್ಕೇನು ಕೊರತೆ
ಎಲ್ಲರಿಗೂ ಮುಕ್ತವಾಗಿದೆ...
ಯುಕ್ತಿ ಶಕ್ತಿ ಸಾಮರ್ಥ್ಯ
ಬಳಸಿದಷ್ಟು ಫಲ ದಕ್ಕುತ್ತದೆ....

ತೀರದಲಿ ಕುಳಿತವನಿಗೆ
ಮರುಳೊಂದೇ ಪ್ರಾಪ್ತಿ..
ಬದುಕಿನಾಳಕೆ ಇಳಿದವಗೆ
ಅನುಭವದ ತೃಪ್ತಿ...

ಬಾಳ ಸಾಗರಕ್ಕಿಳಿದು
ದಕ್ಕಿದಷ್ಟು
ಸುಖ ಸಂಪತ್ತು
ಪಡೆಯುವುದೇ ಬದುಕು...

ಇಲ್ಲಿವೆ ಮಾರಕ ಅಲೆ
ಕಷ್ಟ ನಷ್ಟಗಳ ಸರಮಾಲೆ
ಆದರೂ ಈಜಬೇಕು
ಇದ್ದು ಜಯಿಸಲೇಬೇಕು....

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ