ಗುರುವಾರ, ಜೂನ್ 11, 2015

ಸಖಿ ಗೀತೆ......346

ಸಖಿ....

ಯಾರು ಏನೇ ಹೇಳಲಿ
ದೇವರೆಂಬೋ ಕಲ್ಪನೆಯೇ ಅಪೂರ್ಣ...
ಇಲ್ಲೀವರೆಗೂ ಯಾರಿಗೂ
ದಕ್ಕಿಲ್ಲ ದೇವರು ಸಂಪೂರ್ಣ...

ಅವರವರ ಭಾವ ಬಕುತಿಗೆ
ನಂಬಿಕೆ ಆಚರಣೆ ಆಕಾಂಕ್ಷೆಗೆ
ತಕ್ಕಂತೆ ದೇವರ ರೂಪಕ..
ತಾತ್ಕಾಲಿಕ ಬದುಕಿನಲಿ ಎಲ್ಲವೂ
ಖಾಯಂ ಆಗಿ ಬೇಕೆನ್ನುವವರ
ಬಯಕೆಯ ಪ್ರತೀಕ....

ಇದ್ದಾನೆ ಇಲ್ಲ ಎಂಬುವವರಾರೂ ಕಂಡಿಲ್ಲ,
ದೇವರಿನ್ನೂ ಯಾರ ಕಣ್ಣಿಗೂ ಬಿದ್ದಿಲ್ಲ..
ಇರಬಹುದು ಇಲ್ಲದಿರಬಹುದೆಂಬ
ಊಹಾಪೋಹಗಳಿಗಂತೂ ಕೊನೆಮೊದಲಿಲ್ಲ...

ಕುರುಡರು ಆನೆ ಮುಟ್ಟಿದಂತೆ
ಅವರವರ ಅನುಭವಕ್ಕೆ ದಕ್ಕಿದಷ್ಟು ವಿವರಣೆ...
ಆಸ್ತಿಕರಿಂದ ನಿತ್ಯ ಪೂಜಾರಾಧನೆ
ನಾಸ್ತಿಕರಿಂದ ಎಲ್ಲಾ ನಿರಾಕರಣೆ.....

ಮೂರ್ತರೂಪಕ್ಕಿರುವ ತರ್ಕಬದ್ಧತೆ
ಅಮೂರ್ತದ ವ್ಯಾಖ್ಯಾನಕ್ಕೆಲ್ಲಿ....?
ಭೌತಿಕ ಪ್ರಪಂಚದ ಪರಿಕಲ್ಪನೆಗೆ
ತಾರ್ಕಿಕ ನೆಲೆಯೆಲ್ಲಿ ಭಾವಲೋಕದಲ್ಲಿ...?

ಇಂದ್ರೀಯಗಳಿಗೆ ದಕ್ಕಿದ್ದನ್ನು
ವಾದಿಸಬಹುದು ಸಾಧಿಸಬಹುದು...
ಅಗೋಚರ ಅತೀಂದ್ರೀಯ ಅನುಭೂತಿಯನ್ನು
ಹಾಗೂ ಹೀಗೂ ಊಹಿಸಬಹುದು....

ಮನಸುಗಳ ಬೆಸೆಯುವುದಿದ್ದರೆ
ಇದ್ದರಿರಲಿ ಬಿಡು ದೇವರು ತನ್ನ ಪಾಡಿಗೆ...
ಮನಸುಗಳ ಒಡೆಯುವುದಿದ್ದರೆ
ಕಳಿಸಿಬಿಡು ಎಲ್ಲಾ ದೇವರ ಕಾಡಿಗೆ....

ಎಲ್ಲಾ ವಾದಗಳನು ಗೆಲ್ಲಲೇಬೇಕೆಂದೇನಿಲ್ಲ,
ನಿಖರವಾಗಿ ಗೊತ್ತಿಲ್ಲದರ ಕುರಿತು
ಬದುಕು ಪೂರಾ ವಾದಿಸುವ ಬದಲು...
ಪರಸ್ಪರ ನಂಬಿಕೆಗಳನು ಗೌರವಿಸಿ
ಅಪನಂಬಿಕೆಗಳನು ನಿರ್ಲಕ್ಷಿಸಿದರೆ
ಬಗೆಹರಿದೀತು ದಿಗಿಲು......

- ಯಡಹಳ್ಳಿ

ಸಖಿ ಗೀತೆ......345

ಸಖಿ...

ಗೆಲುವೆಂಬುದೇನು
ಆಕಾಶದಿಂದ ಉದುರುವುದೇ...?
ಸೋಲೆಂಬುದೇನು
ಪಾತಾಳದಿಂದ ಉದಯಿಸುವುದೇ..?

ಗೆಲ್ಲಲೇಬೇಕೆಂದರೆ
ಏಳು, ಎಚ್ಚರಾಗು, ಓಡು...
ಅಕ್ಕಪಕ್ಕದ ಆಕರ್ಷಣೆ ಬಿಟ್ಟು
ಸದಾ ಗುರಿಯತ್ತ ನೋಡು....

ಬಿದ್ದವರೆಷ್ಟೋ ಎದ್ದವರೆಷ್ಟೋ
ಬದುಕಿನ ಓಟದ ಆಟದಲಿ....
ಬಿದ್ದು ಮತ್ತೆ ಎದ್ದವರೆಷ್ಟೋ
ನಿತ್ಯ ಸಾಗುವ ಬದುಕಿನಲಿ....

ಆಡಲೇಬೇಕು ಬದುಕಿನ ಆಟ
ಕಲಿಯಲೇ ಬೇಕು ಗೆಲ್ಲುವ ಪಾಠ...
ಸೋಲಿಲ್ಲದೇ ಎಲ್ಲೂ ಗೆಲುವಿಲ್ಲಾ
ಸತತ ಯತ್ನ ಮಾಡದವರಾರೂ
ಇಲ್ಲಿವರೆಗೂ ಗೆದ್ದಿಲ್ಲಾ...

- ಯಡಹಳ್ಳಿ

ಸಖಿ ಗೀತೆ......344

ಸಖಿ..

ಅತೃಪ್ತಿಯಿಂದ
ಸಾಧಿಸಿದ
ಯಶಸ್ಸಿಗಿಂತಲು....

ಸಂತೃಪ್ತಿಯ
ಬದುಕು ಎಲ್ಲಕ್ಕಿಂತ
ಮಿಗಿಲು....

ಭೌತಿಕ ಯಶಸ್ಸಿಗೇನು
ಬಹಿರಂಗದಲ್ಲಿ
ಭಾರೀ ಬೆಲೆ....

ತೃಪ್ತ ಬದುಕಿಗೆ
ಅಂತರಂಗದಲ್ಲಿದೆ
ಜೀವ ಸೆಲೆ....

ಒತ್ತಡ ಒತ್ತಾಯ
ಪರರ ಇಚ್ಚೆಗಳಿಗಾಗಿ
ಬದುಕುವುದು ಪಕ್ಕಕ್ಕಿರಲಿ...

ನಮ್ಮಿಚ್ಚೆಯಂತೆ ನಡೆದು
ನೆಮ್ಮದಿಯ ಪಡೆಯಲಿರುವುದೊಂದೇ
ಜೀವನ ಲೆಕ್ಕಕ್ಕಿರಲಿ....

- ಯಡಹಳ್ಳಿ

ಸಖಿ ಗೀತೆ......343

ಸಖಿ...

ನಮಗಾಗದವರು
ಅದೆಷ್ಟು ಕೆಟ್ಟದಾಗಿ
ನಡೆದುಕೊಂಡರೇನು...?
ಬೆನ್ನ ಹಿಂದೆ ಬೇಕಾದಂತೆ
ಆಡಿಕೊಂಡರೇನು..?

ಅವರಷ್ಟು ಕೀಳು ಮಟ್ಟಕ್ಕೆ
ನಾವಿಳಿದರೆ ಅವರಿಗೂ
ನಮಗೂ ವ್ಯತ್ಯಾಸವೇನು....?
ನಾಯಿ ಬೊಗಳುತ್ತದೆಂದು
ನಾವೂ ಬೊಗಳುತ್ತೇವೇನು....?

ನಿಂದಕರಿದ್ದರಿರಲಿ ಬಿಡು
ಕೇರಿಯಲಿ ಹಂದಿ ಇದ್ದಹಾಗೆ
ಬೈಯುವವರ ಬೊಗಳುವವರ
ನಿರ್ಲಕ್ಷಿಸಿ ಮುನ್ನೆಡೆ ಆನೆಯ ಹಾಗೆ....

ಬದುಕಲ್ಲೊಮ್ಮೆ ಸೋತರೆ
ಆಳಿಗೊಂದು ಕಲ್ಲೆಸೆಯುತ್ತಾರೆ..
ಗೆದ್ದರೆ ಸರತಿಸಾಲಲಿ ನಿಂತು
ಓಡಿ ಬಂದು ಕೈಕುಲುಕುತ್ತಾರೆ....

ಅಡೆತಡೆಗಳೆಷ್ಟೇ ಇರಲಿ ದಾರಿಯಲಿ
ಸದಾ ಗೆಲುವಿನತ್ತ ಲಕ್ಷವಿರಲಿ...
ಕಾಲೆಳೆಯುವವರು ಎಲ್ಲಿ ಇರೋದಿಲ್ಲ
ಎಳೆಯಲು ಕಾಲು ಸಿಗದಷ್ಟು ಬೆಳೆಯಬೇಕಲ್ಲಾ....!!!

- ಯಡಹಳ್ಳಿ

ಸಖಿ ಗೀತೆ.....342

ಸಖಿ...

ಯಾರು ಹೇಳಿದವರು..?

ಮನುಷ್ಯರು ಕಳ್ಳರು
ಸುಳ್ಳರು ಆತ್ಮವಂಚಕರೆಂದು....
ಹಿಂಸಕರು, ದ್ವಂಸಕರು
ಸ್ವಾರ್ಥಿಗಳು ಪಾತಕಿಗಳೆಂದು..

ಮನುಷ್ಯರೆಂದೂ
ಜೀವವಿರೋಧಿಗಳಲ್ಲ,
ಕೆಟ್ಟ ಕೆಲಸ ಮಾಡುವುದಿಲ್ಲ,
ನೀಚರಂತೂ ಮೊದಲೇಅಲ್ಲ...

ಜನಪೀಡಕರು
ಸಮಾಜದ್ರೋಹಿಗಳು
ದುಷ್ಟ ದುರಾಚಾರಿಗಳೆಲ್ಲಾ
ಮನುಷ್ಯರೇ ಅಲ್ಲ.....!!!

- ಯಡಹಳ್ಳಿ

ಬುಧವಾರ, ಜೂನ್ 10, 2015

ಸಖಿ ಗೀತೆ.....341

ಸಖಿ...

ಪಡ್ಡೆ ಹುಡುಗರು
ಅವಳಿವಳೆದೆ
ಕಣ್ಣು ಕೆನ್ನೆ ತುಟಿ
ನಿತಂಬಗಳ ಮೇಲೆ
ಕಣ್ಗಾವಲಿಡುವುದನು
ಬಿಡಬೇಕೆಂದರೂ...

ಟಿವಿ ವಾಹಿನಿಗಳು
ನೆಟ್ ಮೀಡಿಯಾಗಳು
ಸಿನೆಮಾ ಮೊಬೈಲಗಳು
ಪ್ರಚೋದಿಸುತ್ತವೆ...

ದೇಶದಲ್ಲಿ
ಅತ್ಯಾಚಾರ
ಹೆಚ್ಚುತ್ತಿವೆ.....!

-ಯಡಹಳ್ಳಿ

ಸಖಿ ಗೀತೆ......340

ಸಖಿ...

" ಸಮಾನತೆ ಸಿಗುವವರೆಗೂ
ರಾಜಿ ರಹಿತ ಹೋರಾಟ,
ಹಸನಾಗಲಿ ದುಡಿಯುವವರ ಬಾಳು....

ಕೆಚ್ಚಿಲ್ಲದ ಕಿಚ್ಚಿಲ್ಲದ
ನರಜನ್ಮ ಯಾಕೆ
ಬೇಕು ಹೇಳು...."

ಎಂದೆಲ್ಲಾ
ಯುವಕರಾಗಿದ್ದ ನಮ್ಮ
ತಲೆಗೆ ಹುಳುಬಿಟ್ಟ
ಅಂದಿನ ಕ್ರಾಂತಿಕಾರಿ..

ಇಂದು ಸರಕಾರಿ
ಕೃಪಾ ಪೋಷಿತ
ಪ್ರಾಧಿಕಾರದ ಅಧಿಕಾರಿ....!

- ಯಡಹಳ್ಳಿ

ಸಖಿ ಗೀತೆ.....339

ಸಖಿ..

ಬರೀ ಹೂವು ಹಣ್ಣು
ಸುಂದರ ಹೆಣ್ಣು...
ಚಂದ್ರ ತಾರೆ
ಕೊಳದ ತಾವರೆ...
ಅಂತೆಲ್ಲಾ ಕವಿತೆ
ಕೊರೆದವನೆಂಥಾ ಕವಿ...

ಜನರ ನೋವು
ನ್ಯಾಯದ ಸಾವು
ಮಾಯದ ಗಾಯ
ದಾರಿತಪ್ಪಿದ ದ್ಯೇಯ...
ಕುರಿತು ಸ್ಪಂದಿಸದಿದ್ದರೆ
ಅದೆಂತಾ ಕವಿತೆ...

ಅವರಿವರ
ಭಾವ ಬಕುತಿಗೆಲ್ಲಿ
ನೋವಾದೀತೆಂಬ
ಅಳುಕಿರುವಾತ
ಕವಿಯಾಗಲಾರ
ಸಮಾಜದ ಸಂಕಟಕ್ಕೆ
ಕಿವಿಯಾಗಲಾರ...

ಕವಿತೆ
ಕನ್ನಡಿಯಾಗಬೇಕು
ಅಸಮಾನತೆ ತೋರಿಸಲು...
ಮುನ್ನುಡಿಯಾಗಬೇಕು
ಸಮಸಮಾಜ ಕಟ್ಟಲು...
ಬೆನ್ನುಡಿ ಬರೆಯಬೇಕು
ಜಾಗೃತಿ ಮೂಡಿಸಲು...

ದ್ವೇಷ ಹುಟ್ಟುಹಾಕುವ
ಧರ್ಮ ನಾಶವಾಗಲಿ..
ಸಮಾಜ ಒಡೆಯುವ ಜಾತಿ
ನಾಮಾವಶೇಷವಾಗಲಿ..

ಅಸಮಾನತೆಗೆ ಪ್ರೇರೇಪಿಸುವ
ಪುರೋಹಿತಶಾಹಿ ಗಡಿಪಾರಾಗಲಿ...
ಎನ್ನುವ ಪ್ರಜ್ಞೆ ಕವಿಗಿರಲಿ
ಕವಿತೆ ಪೂರ್ವಾಗ್ರಹಗಳ ಕಳಚಿಕೊಳ್ಳಲಿ..

- ಶಶಿ ಯಡಹಳ್ಳಿ

ಸಖಿ ಗೀತೆ.....338

ಸಖಿ...

ಹೇಗೆ ಕೆಲವರಿರುತ್ತಾರೆ
ಆಟಗಾರರಿದ್ದಂತೆ
ಸದಾ ಗುರಿಯತ್ತಲೇ
ಅವರ ಓಟ...

ಇನ್ನು ಕೆಲವರಿರುತ್ತಾರೆ
ಅಂಪೈರಗಳಿದ್ದಂತೆ
ಓಡುವವರು ಮಾಡುವ
ತಪ್ಪುಗಳತ್ತಲೇ
ಅವರ ನೋಟ...

ಇಬ್ಬರೂ ಬೇಕು ಆಟಕೆ
ಬದುಕಿನ ನಿರಂತರ ಓಟಕೆ
ಸಾಧನೆಯ ಗುರಿ ಮುಟ್ಟೋದಕ್ಕೆ.....

- ಯಡಹಳ್ಳಿ

ಸಖಿ ಗೀತೆ.......337

ಸಖಿ...

ನಗೆಯ
ಹಿಂದಿನ
ನೋವನ್ನು..

ಕೋಪದ
ಹಿಂದಿನ
ಪ್ರೀತಿಯನ್ನು....

ಮೌನದ
ಹಿಂದಿನ
ಕಾರಣವನ್ನು...

ಅರ್ಥ ಮಾಡಿಕೊಳ್ಳುವವ
ನಿಜವಾದ
ಪ್ರೇಮಿ...

ಪ್ರೀತಿ ಕುರುಡಾದರೇನಂತೆ
ಪ್ರೀತ್ಸೋರಿಗೆ
ಕಣ್ಣಿರಬೇಕು...

ಒಂದು ತಪ್ಪಾದ ಆಯ್ಕೆ
ನೆಮ್ಮದಿ ಕೊಲ್ಲುವುದೆಂಬ
ಎಚ್ಚರವಿರಬೇಕು....

- ಯಡಹಳ್ಳಿ

ಸಖಿ ಗೀತೆ......336

ಸಖಿ...

ಸಾಗರದಂತೆ
ನಮ್ಮ ಬದುಕು,
ಅದರಲೇ 
ಸಾರ್ಥಕತೆ ಹುಡುಕು....

ಎಲ್ಲರಿಗೂ ಎಲ್ಲವೂ
ಸಿಕ್ಕುವುದಿಲ್ಲ,
ಬಾಳೆಂಬ ಸಾಗರ
ಯಾರೊಬ್ಬರ ಸ್ವತ್ತಲ್ಲ....

ಹಲವರಿಗೆ ಉಪ್ಪು
ಕೆಲವರಿಗೆ ಚಿಪ್ಪು...
ಬಲೆಬೀಸಿ ಹಿಡಿದವರ
ಪಾಲಿಗಿದೆ ಮತ್ಸ್ಯ ಸಂಪತ್ತು..
ಆಳಕ್ಕಿಳಿದು ತಡಕಿದರೆ
ಸಿಗಬಹುದು ಕಡಲ ಮುತ್ತು....

ಅವಕಾಶಕ್ಕೇನು ಕೊರತೆ
ಎಲ್ಲರಿಗೂ ಮುಕ್ತವಾಗಿದೆ...
ಯುಕ್ತಿ ಶಕ್ತಿ ಸಾಮರ್ಥ್ಯ
ಬಳಸಿದಷ್ಟು ಫಲ ದಕ್ಕುತ್ತದೆ....

ತೀರದಲಿ ಕುಳಿತವನಿಗೆ
ಮರುಳೊಂದೇ ಪ್ರಾಪ್ತಿ..
ಬದುಕಿನಾಳಕೆ ಇಳಿದವಗೆ
ಅನುಭವದ ತೃಪ್ತಿ...

ಬಾಳ ಸಾಗರಕ್ಕಿಳಿದು
ದಕ್ಕಿದಷ್ಟು
ಸುಖ ಸಂಪತ್ತು
ಪಡೆಯುವುದೇ ಬದುಕು...

ಇಲ್ಲಿವೆ ಮಾರಕ ಅಲೆ
ಕಷ್ಟ ನಷ್ಟಗಳ ಸರಮಾಲೆ
ಆದರೂ ಈಜಬೇಕು
ಇದ್ದು ಜಯಿಸಲೇಬೇಕು....

- ಶಶಿ ಯಡಹಳ್ಳಿ

ಸಖಿ ಗೀತೆ.....335

ತರಲೆ ಕಾವ್ಯ...
***********
ಸಖಿ....

ಪೇಜಾವರರ ಮಠದ ಹಿಂದೆ
ಸಾಬಿಯೊಬ್ಬನ ಮನೆಯಿಂದ
ದಿನವೂ ಕೋಳಿ ಮಸಾಲೆ ವಾಸನೆ
ಹಾರವರಿಗೆ ಸಹಿಸಲಾರದ ಯಾತನೆ...

ಬೇಸತ್ತ ಬ್ರಾಹ್ಮಣರು
ಜಗದ್ಗುರುಗಳಿಗೆ ಕೊಟ್ಟರು ದೂರು..
ಸಾಬಿಯನ್ನು ಕರೆಸಿ ಹಿಂದೂವಾಗಲು
ಪ್ರೇರೇಪಿಸಿದರು ಪೇಜಾವರರು..

ಕೊನೆಗೂ ಒಪ್ಪಿದ ಸಾಬಿಯ
ತಲೆಮೇಲೆ ಚಿಮುಕಿಸಿ ನೀರು
ಜಗದ್ಗುರುಗಳೆಂದರು
'ಮುಸ್ಲಿಂ ಅಗಿ ಹುಟ್ಟಿದೆ
ಮುಸ್ಲಿಂ ಆಗಿ ಬೆಳೆದೆ
ಇನ್ಮೇಲೆ ನೀನು ಹಿಂದೂ
ಮರೆಯಬೇಡ ಎಂದೂ...'

ಮರುದಿನ ಮತ್ತೆ ಆತನ
ಮನೆಯಿಂದ ಕೋಳಿ ವಾಸನೆ..
ಬೆಚ್ಚಿ ಬಿದ್ದ ಹಾರವರಿಂದ
ಗುರುಗಳಿಗೆ ದೂರು ರವಾನೆ....

ಸ್ವತಃ ಗುರುಗಳೇ ಓಡಿ ಬಂದರು
ಸಾಬಿಯ ಕಂಡು ಮೂರ್ಚೆ ಹೋದರು
ಆತ ಕೋಳಿಯ ತಲೆ ಮೇಲೆ
ಚಿಮುಕಿಸಿ ನೀರು ಹೇಳುತ್ತಿದ್ದ
''ನೀನು ಕೋಳಿಯಾಗಿ ಹುಟ್ಟಿದ್ದೆ
ಕೋಳಿಯಾಗಿ ಬೆಳೆದೆ,
ಇನ್ಮೇಲೆ ನೀ ಆಲೂಗಡ್ಡೆ...''

- ಯಡಹಳ್ಳಿ

ಸಖಿ ಗೀತೆ.......334

ಸಖಿ...

ನಂಬಿಕೆ ಎಲ್ಲವನ್ನೂ
ಸರಿಪಡಿಸುತ್ತದೆನ್ನುವುದು
ಬರೀ ಹುಸಿ,,,

ಅಪನಂಬಿಕೆ ಇರುವವರನ್ನು
ನಂಬಿದರೆ ಹಾಳಾಗುವುದು
ಬದುಕಿನ ಖುಷಿ...

ಸದಾಶಯ ಸದಾಕಾಲ
ಸರಿಹೋಗುವುದಿಲ್ಲ,,,
ದುರಾಸೆಯ ಜನರೆಂದೂ
ಬದಲಾಗುವುದಿಲ್ಲ...

ಪ್ರೀತಿ ಇರುವಷ್ಟು ಕಾಲ ಸುಂದರ
ಎನ್ನುವ ಮಾತಲ್ಲಿ ಸುಳ್ಳಿಲ್ಲ..
ನಂಬಿಕೆ ಹೋಗಿ ಸದಾಶಯ ಸತ್ತಾಗ
ಒಲವಿಗೆ ಸೋಲು ತಪ್ಪೊಲ್ಲ....

- ಶಶಿ ಯಡಹಳ್ಳಿ

ಸಖಿ ಗೀತೆ....333

ಸಖಿ...

ಇರಿಯುವ ಕತ್ತಿ
ಹರಿತವಾದ ಮಾತು
ಎರಡೂ ಒಂದೇ...

ವಿವೇಚನೆಯಿಂದ
ಬಳಸದಿದ್ದರೆ
ಕಾದಿದೆ ದುರಂತ ಮುಂದೆ....

-ಯಡಹಳ್ಳಿ

ಸಖಿ ಗೀತೆ.......332

ಸಖಿ...

ನಮ್ಮಲ್ಲೇನಿದೆ
ಅಂತಾ ವಿಶೇಷ
ಎಲ್ಲರಂತೆ 
ನಾನೂ ನೀನೂ....

ಎಲ್ಲರೊಳಗೊಂದಾಗಿ
ಎಲ್ಲರ ಮೀರಿ
ಬೆಳೆಯುವವ
ಸಾಧಕ...

ಅವರಿವರ ಆಡಿಕೊಳ್ಳುತ್ತಾ
ಅಮೂಲ್ಯ ಸಮಯ
ವ್ಯರ್ಥಗೊಳಿಸುತ್ತಾ
ಬದುಕು ಸವೆಸುವವ
ಭೂಮಿಗೆ ಬಾಧಕ...

ಪ್ರಿಜ್ನಿಂದ ತೆಗೆದ
ಐಸ್ ಕ್ಯಾಂಡಿಯಂತೆ
ಮನುಷ್ಯನ ಬದುಕು..
ತಿನ್ನು ಇಲ್ಲಾ ಬಿಡು
ಗ್ಯಾರಂಟಿ ಮುಗಿಯುತ್ತದೆ ಸರಕು....

-ಶಶಿ ಯಡಹಳ್ಳಿ

ಸಖಿ ಗೀತೆ......331

ಸಖಿ..

ಅನುದಿನ
ಜೊತೆಯಲ್ಲಿದ್ದಾಗ
ಆದರಿಸಲಿಲ್ಲ...

ಪ್ರತಿಕ್ಷಣ
ಬಯಸಿ ಬಂದಾಗ
ಸಹಕರಿಸಲಿಲ್ಲ...

ಮುಖತಿರುಗಿಸಿದಾಗೆಲ್ಲಾ
ಮನ ನೊಂದುಕೊಂಡಿದ್ದು
ನೀ ಗಮನಿಸಲಿಲ್ಲ....

ಬಯಕೆಯ ಬೆಂಕಿಗೆ
ತಣ್ಣೀರು ಸುರಿಯುವುದ
ನೀ ಮರೆಯಲಿಲ್ಲ..

ಯಾವಾಗ...

ಇನ್ಯಾರದೋ ಪಿಸು
ಮಾತಿಗೆ ದ್ವನಿಯಾದೆನೋ
ಬೆಂಕಿ ಬಿದ್ದಿತು ಹೆಣ್ಣೆದೆಗೆ...

ಅನುಮಾನದ ಜೊತೆಗೆ
ಅಸೂಯೆಯ ಬೆಂಕಿ
ದಗದಗಿಸಿತು ನಿನ್ನೆದೆಗೆ..

ಇಷ್ಟಾದರೂ ಒಲವು
ಮೂಡಲಿಲ್ಲ ನಿನ್ನ
ಬರಡು ಮನದಲಿ...

ಪ್ರೀತಿ ಪ್ರೇಮ ಪ್ರಣಯ
ಚಿಗುರಲಿಲ್ಲ
ಕೊರಡು ಹೃದಯದಿ...

- ಶಶಿ ಯಡಹಳ್ಳಿ

ಸಖೀ ಗೀತೆ.....330

ಸಖಿ...

ಹೆತ್ತವರು
ಸಂಪಾದನೆಯ
ಪಾಠ ಹೇಳುವ 
ಮೊದಲು ಮಗುವಿಗೆ
ಮಾನವೀಯತೆ
ಕುರಿತು ಅರಿವು
ಮೂಡಿಸಬೇಕಿದೆ.....

ಮಗು ಬೆಳೆದು ಮುಂದೆ
ಎಲ್ಲವನ್ನೂ ಎಲ್ಲರನ್ನೂ
ಹಣ ಅಧಿಕಾರ ಅಂತಸ್ತಿನಿಂದ
ಅಳೆಯುವ ಬದಲು
ಮನುಷ್ಯರನ್ನು ಮನುಷ್ಯರನ್ನಾಗಿ
ಗೌರವಿಸುವುದನ್ನು
ಕಲಿಯಬೇಕಾಗಿದೆ.....

ಧನದಾಹಿಗಳ
ಸೃಷ್ಟಿಸುವ ಬದಲು
ಮನೆಮನೆಗಳಲಿ
ಮಕ್ಕಳೆದೆಯಲ್ಲಿ
ಬಸವನ ಮಾನವೀಯತೆ
ಬುದ್ಧನ ಬೆಳಕು
ಬೆಳಗಬೇಕಿದೆ......

-ಶಶಿ ಯಡಹಳ್ಳಿ

ಸಖಿ ಗೀತೆ.....329

ಸಖಿ...

ನಿಜವಾಗಿ
ಪ್ರೀತಿಸಿದವರೆಂದೂ
ದೂರಿ ದೂರಾಗುವುದಿಲ್ಲ...

ದೂರಾಗುವ ವ್ಯಕ್ತಿ
ಎಂದೂ ಯಾರನ್ನೂ
ಪ್ರೀತಿಸುವುದಿಲ್ಲ....

ಪ್ರೀತಿಯೊಂದರ ಸಾವಿಗೆ
ನೂರಾರು
ಕಾರಣಗಳಿದ್ದರೂ...

ಅದನ್ನು ಉಳಿಸಿಕೊಳ್ಳುವ
ಒಂದು ಸಕಾರಣ
ಹುಡುಕುವವನೇ ನಿಜ ಪ್ರೇಮಿ.....

ಪ್ರೀತಿಯೆಂಬುದನ್ನು
ಪಡೆಯುವುದಕ್ಕಿಂತ
ಉಳಿಸಿಕೊಳ್ಳುವುದೆ ಸವಾಲು...

ಎಂದೆಂದೂ ಮುಚ್ಚದಿರಲಿ
ಪ್ರೀತಿಸುವವರ
ಮನದ ಬಾಗಿಲು...

- ಶಶಿ ಯಡಹಳ್ಳಿ

ಸಖಿ ಗೀತೆ......328

ಸಖಿ...

ಪ್ರತಿ ದಿನ
ತಿನ್ನುವುದಕ್ಕೂ
ಮನುಷ್ಯರಿಗೆ
ಒಂದು ಮಿತಿಯಿದೆ....

ದೇಹದ
ಅಗತ್ಯತೆಗೂ
ಒಂದು
ಗತಿ ಇದೆ...

ಇತಿ ಮಿತಿಯಲ್ಲಿ
ಸೇವಿಸದಿದ್ದರೆ
ಔಷಧದಂತೆ
ಆಹಾರ...

ಮುಂದೊಂದು ದಿನ
ಗ್ಯಾರಂಟಿಯಾಗಿ
ಔಷಧವೇ ನಮ್ಮ
ಉಪಹಾರ....

- ಯಡಹಳ್ಳಿ

ಸಖಿ ಗೀತೆ......327

ಸಖಿ....

ಈ ಪ್ರೀತಿ
ಅನ್ನೋದೇ ಹೀಗೆ
ಈರುಳ್ಳಿ ಇದ್ದ ಹಾಗೆ....

ಕಾಲಕ್ರಮದಲ್ಲಿ
ಬಿಡಿಸುತ್ತಾ ಹೋದಂತೆ
ಕೊನೆಗುಳಿಯೋದು
ಕಣ್ತುಂಬಾ ನೀರು
ಮನತುಂಬಾ ಬೇಜಾರು....

ಕಣ್ಣೀರು ಖಾತ್ರಿಯಾದ್ರೂ
ಈರುಳ್ಳಿ ಬಿಟ್ಟು
ಇರಲುಂಟೆ...?

ನಲಿವಿಗಿಂತಾ ನೋವು
ಹೆಚ್ಚೆಂದು ಗೊತ್ತಿದ್ದೂ
ಪ್ರೀತಿ ಇಲ್ಲದ ಬದುಕುಂಟೆ..?

- ಯಡಹಳ್ಳಿ

ಸಖಿ ಗೀತೆ.....326

ಸಖಿ...

ಜಾಗ ಸಿಕ್ಕಲ್ಲಿ
ಬೇರೂರಿ...
ಹಾಸಿಗೆ ಇದ್ದಷ್ಟು
ಕಾಲೂರಿ..
ಬದುಕು ಸವೆಸುವ
ನಾನೆಲ್ಲಿ....

ಆಗಸದಂಗಳದಿ
ಮನಸೂರಿ...
ಕನಸ ರೆಕ್ಕೆ
ಬಿಚ್ಚಿ ಹಾರಿ...
ಭ್ರಮೆಯಲ್ಲಿ ವಿಹರಿಪ
ನೀನೆಲ್ಲಿ...

ಭುವಿಗೂ ಭಾನಿಗೂ
ಎಷ್ಟೊಂದು ಅಂತರ...
ಒಂದಕ್ಕೊಂದು ಸೇರಲೆಂದೂ
ತೋರಬಾರದು ಕಾತುರ..

ಭೂಮಿ ತಲೆ ಎತ್ತಿ ನೋಡಬೇಕು
ಆಗಸ ತಲೆ ತಗ್ಗಿಸಿ ಕಾಣಬೇಕು ..
ಆಗಲಾದರೂ ನೋಟ ಬೆರೆಯಬಹುದು
ಮನದಲಿ ಹೂದೋಟ ಅರಳಬಹುದು...

ಆಗುವುದಿದ್ದರೆ ಆಗಲಿ ಬಿಡು
ಸಮವಯಸ್ಕರಲ್ಲಿ ಸ್ನೇಹ
ಸಮಾನ ಮನಸ್ಕರಲ್ಲಿ ಪ್ರೇಮ..
ಮೀರುವುದೇಗೆ ಭೂ-ಗಗನ ತಾರತಮ್ಯ

ಮನುಷ್ಯ ನಾನು... ಬೇರಿದೆ
ಭೂಮಿಯಲಿ, ಆಸೆ ಆಗಸದಲಿ...
ದೇವತೆ ನೀನು... ಬೇರಿಲ್ಲ ಭುವಿಯಿಲ್ಲ
ಪರಸ್ಪರ ಪ್ರೀತಿ ಪ್ರೇಮ ಹುಟ್ಟುವುದೇನು

- ಯಡಹಳ್ಳಿ

ಸಖಿ ಗೀತೆ.....325

ಸಖಿ...

ಅವಳಿವಳ ನಗುವಿಗೆ
ಅರ್ಥ ಹುಡುಕುವುದರಲ್ಲೇ
ವ್ಯರ್ಥ ಕಾಲಹರಣ
ಮಾಡುತ್ತಿರುವ ಯುವಕರು...

ಸಮರ್ಥವಾಗಿ
ಬದುಕು ಕಟ್ಟುವುದರತ್ತ
ಗಮನ ಕೊಟ್ಟರೆ
ಬದುಕು ಸಾರ್ಥಕ...

ಸಮಸ್ಯೆಗಳನು ಸವಾಲಾಗಿಸಿ
ಗುರಿ ತಲುಪಿ ಸಾಧಿಸಿದರೆ
ಅವಳ ಜೊತೆ ಅವಳ
ನಗೂ ಕೂಡಾ ಹಿಂದೆ ಹಿಂದೆ...

ಸಾಧಕನ ಹಿಂದೆ ಸಾವಿರಾರು
ನಗು ಮುಖದ ನಾರಿಯರ ಸಾಲು..
ಸೋತವನ ಜೊತೆಗೇನಿದೆ
ಬದುಕು ಹಳವಂಡಗಳ ಪಾಲು...

- ಯಡಹಳ್ಳಿ

ಸಖಿ ಗೀತೆ......324

ಸಖಿ....

ಇಂದು ಮತ್ತೊಂದು
ಹೊಸ ದಿನ,
ನುಡಿಯಲಿ ಮನ
ಉಲ್ಲಾಸದ ಗಾನ.....

ದಿನ ಬೆಳಗಾದರೆ
ಉತ್ತಮ ನಾಳೆಗಳಿಗಾಗಿ
ದುಡಿಯುವ ಧಾವಂತ,

ಶ್ರೀಮಂತ ಬದುಕು ಕಟ್ಟಲು
ಎದುರಿಸ ಬೇಕಿದೆ
ಹಲವಾರು ಅಡ್ಡಿ ಆತಂಕ...

ಬದುಕು ಸುಸ್ಥಿರಗೊಂಡರೆ
ಮುಂದೆ ಮಕ್ಕಳ ಭವಿಷ್ಯ
ತದನಂತರ ಮೊಮ್ಮಕ್ಕಳ ವಿಷ್ಯ...

ಕತಾಕಥಿತ ಗುರಿಯತ್ತ
ಹೀಗೆ ಸಾಗುತ್ತದೆ
ಬಹುತೇಕರ ಬದುಕು..

ಮೇಣದ ಹಾಗೆ ಉರಿದು
ಕುಟುಂಬ ಪರಿವಾರಕ್ಕೆ
ನೀಡುತ್ತೇವೆ ಬೆಳಕು...

ಇಷ್ಟೆಲ್ಲಾ ಮಾಡಿದರೂ ಕೊನೆಗೆ
ಜೊತೆಗಾರರ ಅಲಕ್ಷ
ಮಕ್ಕಳು ಮರಿಗಳ ನಿರ್ಲಕ್ಷ...

ಲೆಕ್ಕಾಚಾರ ತಪ್ಪಿದರೆ ವೃದ್ದಾಶ್ರಮ
ಸತ್ತರೆ ಬೀದಿಗೆಳೆತಂದು
ಹಾಕುತ್ತಾರೆ ನಮ್ಮದೇ ಹೆಣ....

ಅಲ್ಲಿಗೆ ಮುಗಿಯಿತು ಬದುಕಿನ
ಸಂತೆ, ಜೀವನದ ಮಹೋನ್ನತ
ಗುರಿ ಮುಟ್ಟಿದಂತೆ.....!

ಕನಸಿದ ಸುಸ್ಥಿರ ನಾಳೆಗಳು
ಅಸ್ಥಿರಗೊಂಡಂತೆ, ಉರಿದುರಿದು
ಬೂದಿಯಾಯ್ತು ಬದುಕು ಜ್ವಾಲಾಮುಖಿಯಂತೆ

ಇದ್ಯಾರಿಗೂ ಗೊತ್ತಿಲ್ಲವೆಂದಲ್ಲ,
ಗೊತ್ತಿದ್ದೂ ಕೂಡಿಡುತ್ತೇವೆ
ಮನೆ ಮಂದಿಗೆಲ್ಲಾ....

ಏನೇ ಹೇಳಿ ಬದುಕು ಇಷ್ಟೇನೆ,
ಈ ದುರಾಸೆಯ ಜಗದಲಿ
ನೆಮ್ಮದಿಯಾಗಿರೋದು ಕಷ್ಟಾನೇ...?

- ಶಶಿ ಯಡಹಳ್ಳಿ

ಸಖಿ ಗೀತೆ.....323

ಸಖಿ...

ಸುಳ್ಳು ಹೇಳಲೇನಿದೆ
ಎಲ್ಲರೂ ಹಾಗಿರುವುದಿಲ್ಲ...
ಆದರೂ... ಕೆಲವರಿರ್ತಾರೆ
ಪತೀಪೀಡಕ ಪತ್ನಿಯರು
ಹಳೆಯ ಲಾರಿ ಇದ್ದ ಹಾಗೆ...

ಎಷ್ಟೇ ರಮಿಸಿ,
ಕೇಳಿದ್ದೆಲ್ಲಾ ಕೊಡಿಸಿ
ಹೇಳಿದಂತೆ ಕೇಳಿದರೂ
ಇದ್ದಕ್ಕಿದ್ದಂತೆ ಹಳಸುತ್ತಾರೆ...
ಹಳೇ ಲಾರಿಯಂತೆ...

ಲಾರಿ ಕೂಡಾ ಹಾಗೇ...
ಎಷ್ಟೇ ಖರ್ಚು ಮಾಡಿ
ವೈನಾಗಿ ರಿಪೇರಿ ಮಾಡಿಸಿ
ಮುಂದೆ ಓಡಿಸುತ್ತಿದ್ದಂತೆ
ನಡುದಾರಿಯಲ್ಲೇ ಕೆಟ್ಟು ನಿಲ್ಲುತ್ತದೆ
ಗಯ್ಯಾಳಿ ಹೆಂಡತಿಯಂತೆ...

ಲಾರಿ ಬಿಡಿ ಕೊಳ್ಳುವವರಿದ್ದರೆ
ಮಾರಿಬಿಡಬಹುದು..
ಇಲ್ಲವಾದಾರೆ ಗುಜುರಿಗೆ
ಹಾಕಬಹುದು...
ಕಟ್ಟಿಕೊಂಡವಳನ್ನೇನು
ಮಾಡುವುದು...?

ಬಿಸಿ ತುಪ್ಪ
ನುಂಗುವ ಹಾಗಿಲ್ಲ
ಉಗುಳುವ ಹಾಗೂ ಇಲ್ಲ....
ಕಿರಿಕಿರಿ ಜೊತೆ ಬಾಳಲಾಗೊಲ್ಲ
ಇದ್ದು ಅನುಭವಿಸೋ ಹಾಗಿಲ್ಲ...
ಸುಮ್ಮನಿರದೇ ಇರುವೆ
ಬಿಟ್ಟುಕೊಂಡವರ ಪರದಾಟ
ನೋಡುವ ಹಾಗಿಲ್ಲ.....!!!

- ಯಡಹಳ್ಳಿ

ಸಖಿ ಗೀತೆ.....322

ಸಖಿ...

ಟೀಕೆಗಳನು
ಸಹಿಸಿಕೊಳ್ಳಲು
ಸಾಮರ್ಥ್ಯವಿಲ್ಲದವರು
ಸಾರ್ವಜನಿಕ
ಜೀವನದಲ್ಲಿರಲು
ಅಯೋಗ್ಯರು....!

ವಿಮರ್ಶೆಗಳು
ಬೇಕು ಬದುಕಲಿ...
ತಪ್ಪಿದ್ದರೆ ಒಪ್ಪಿಕೊ
ಸಾಧ್ಯವಾದರೆ ತಿದ್ದಿಕೊ..

ಎಂದೂ ಕಾಣದು
ನಮಗೆ ನಮ್ಮ ಬೆನ್ನು
ತೋರಿಸಲಿರಬೇಕು
ವಿಮರ್ಶಕನ ಪೆನ್ನು...

ನಿನ್ನೊಳಗೆ
ಹುಟ್ಟಿಕೊಳ್ಳದಿದ್ದರೆ
ಒಬ್ಬ ಸ್ವವಿಮರ್ಶಕ
ಹೊರಗೆ ಹುಟ್ಟಿಕೊಳ್ಳುತ್ತಾನೆ.

ದಾರಿಬಿಟ್ಟು
ದಿಕ್ಕೆಟ್ಟು ಬೌದ್ಧಿಕ
ದಿವಾಳಿಯಾದಾಗ
ದಾರಿ ದೀಪವಾಗುತ್ತಾನೆ..

ನಿಂದಕರೆಂದು ದೂರಿ
ಆತ್ಮವಂಚನೆಯ ದಾರಿ
ಹಿಡಿದವರ ಬದುಕೊಂದು
ಬರೀ ಸುಳ್ಳಿನ ಸವಾರಿ....

- ಯಡಹಳ್ಳಿ

ಸಖಿ ಗೀತೆ......321

ಸಖಿ...

ಮನೆ ಕಾಯಲೆಂದು
ನಾಯಿಯೊಂದ ತಂದು
ತಿನಿಸಿ ಉಣಿಸಿ ಪ್ರೀತಿಸಿ
ಬೆಳೆಸಿದರೆ ಅದು....
ಮತ್ತೊಬ್ಬರ ಮನೆ ಮುಂದೆ
ಬಾಲ ಅಲ್ಲಾಡಿಸಿತು....

ಇನ್ಯಾರೋ ಸಾಕಿದ ನಾಯಿ
ಬಿಟ್ಟುಕೊಂಡು ಬಾಯಿ
ನನ್ಮ ಮುಂದೆ ನಿಂತು
ತಲೆ ಬಾಲ ಆಡಿಸತೊಡಗಿತು...

ಅಲ್ಲಿಗೆ ಲೆಕ್ಕ ಸರಿಹೋಯಿತು...

- ಯಡಹಳ್ಳಿ

ಸಖಿ ಗೀತೆ.......320

ಸಖಿ...

ಇಂದು ವಿಶ್ವ ಪರಿಸರ ದಿನ...

ನಾಯಕರು ಸಸಿ ನೆಡ್ತಾರೆ
ಪೋಟೋ ತೆಗಿಸ್ಕೊಂತಾರೆ
ಮೀಡಿಯಾದಲ್ಲಿ ಮಿಂಚತಾರೆ
ನಾಳೆ ಎಲ್ಲಾ ಮರ್ತೂ ಬಿಡ್ತಾರೆ...

ನೆಟ್ಟ ಸಸಿಗೆ ನೆಟ್ಟಗೆ
ಬೇಲಿ ಹಾಕಿ ಕಾಯೋರಾರು..
ನೀರು ಗೊಬ್ಬರ ಹಾಕೋರಾರು
ಗಿಡವಾಗಿ ಬೆಳಸೋರಾರು..?

ಪ್ರತಿ ವರ್ಷ ಪರಿಸರ ದಿನದಂದು
ನೆಟ್ಟ ಸಸಿಗಳೆಲ್ಲಾ ಈಗ
ಗಿಡವಾಗಿ ಬೆಳದಿದ್ರೆ
ಈ ಧರೆ ಯಾಕೆ ಧಗಧಗಿಸುತ್ತಿತ್ತು....?

ಅತ್ತ ಅಭಿವೃದ್ದಿಗಾಗಿ
ಗಿಡಮರ ಪ್ರಕೃತಿ ಸಂಹಾರ
ಇತ್ತ ಪರಿಸರದ ದಿನ
ಸಸಿ ನೆಡುವ ತರಾತುರಿ ಆತುರ....

ಎಲ್ಲಾ ಬರೀ ತೋರಿಕೆ
ಬಾಯ್ಬಿಟ್ಟರೆ ಬೂಟಾಟಿಕೆ....
ಎಲ್ಲಿದ್ದೀಯಾ ಸಾಲುಮರದ ತಿಮ್ಮಕ್ಕ
ನಿತ್ಯವೂ ಪರಿಸರ ದಿನ ಅಲ್ವೇನಕ್ಕಾ....?

- ಯಡಹಳ್ಳಿ

ಸಖಿ ಗೀತೆ....319

ಸಖಿ..

ಗೌರವಕೂ ಪ್ರೀತಿಗೂ
ನಡುವಿದೆ ಬಿಡಿಸದ
ಅನುಬಂಧ...

ಹೂವಿಗೂ ಸುವಾಸನೆಗೂ
ಇರುವಂತ ಅನುಕ್ಷಣ
ಸಂಬಂಧ....

ಪರಸ್ಪರ ಗೌರವ
ಇಲ್ಲದ ಪ್ರೀತಿ
ಎಷ್ಟಿದ್ದರೇನು..?

ನಿರಾತಂಕವಾಗಿ
ಕೊನೆತನಕ ಒಲವು
ಬಾಳುವುದೇನು...?

ಹೂವು ಹೊಸಗಿದರೂ
ಸುಗಂಧವೆಂದೂ
ಬೇರೆಯಾಗದು...

ಪ್ರೀತಿ ಹೋದರೂ
ಗೌರವಕ್ಕೆಂದೂ
ಚ್ಯುತಿಬರಬಾರದು...

ಒಲವಿರಲಿ ಹೂವಂತೆ
ಬದುಕಾಗಲಿ ಸುಗಂಧದಂತೆ
ಹೂ ಸತ್ತರೂ ಪರಿಮಳ
ಪಸರಿಸಲಿ ಅತ್ತರಿನಂತೆ...

- ಯಡಹಳ್ಳಿ
( ಅತ್ತರ = ಪರ್ಪ್ಯೂಮ್ )

ಸಖಿ ಗೀತೆ.....318

ಸಖಿ...

ಯಾವಾಗಲೂ
ಗುಲಾಬಿಯ ಹಾಗೆ
ನಗುನಗುತ್ತಾ
ನಲಿಯುತ್ತಿರಬೇಕು
ಎಂದುಕೊಳ್ಳುವುದರಲ್ಲಿ
ತಪ್ಪೇನಿಲ್ಲ....!

ಆದರೆ.....

ಮುಳ್ಳುಗಳ ಜೊತೆ
ಅನುಕ್ಷಣವೂ
ಹೊಂದಾಣಿಕೆ
ಮಾಡಿಕೊಂಡು
ಬದುಕುವುದು
ತಪ್ಪೋದಿಲ್ಲ....!!

- ಯಡಹಳ್ಳಿ

ಸಖಿ ಗೀತೆ......317

ಸಖಿ...

ಬತ್ತಿ ಬರಿದಾಗಿದ್ದ
ಅವಳೆದೆಯಲ್ಲಿ
ಆತ ಕೆರೆ ಕಟ್ಟಿ
ಪ್ರೀತಿಯ ವರತೆ
ಹರಿಸಿ ತುಂಬಿಸಿದ...

ಕೆರೆಯ ನೀರು
ತುಳುತುಳುಕಿ
ಹೊರಚೆಲ್ಲದಿರಲೆಂದು
ಸೇತುವೆ ಕಟ್ಟಿ
ಚುಂಬಿಸಿದ...

ಪ್ರೀತಿ ಅತಿಯಾಗಿ
ಒಳಹರಿವು ಹೆಚ್ಚಾಗಿ
ಕೋಡಿ ಬಿದ್ದಿತು ಕೆರೆ
ಬತ್ತಿತು ಒಲವಿನಾಸರೆ
ಪ್ರೀತಿ ಕಂಡವರ ಪಾಲು....!!

ಆಕೆ ಮುಖದಲ್ಲಿ
ಎಂತದೋ ಮಂದಹಾಸ..
ಆತನೀಗ ಎಲ್ಲ
ಕಳೆದುಕೊಂಡ ದೇವದಾಸ...
ಹುಟ್ಟಿತು ವಿರಹ ಗೀತೆ ಸಾಲು...!!!

-ಯಡಹಳ್ಳಿ

ಸಖಿ ಗೀತೆ....316

ಸಖಿ...

ವಿಪರ್ಯಾಸವೆಂದರೆ ಹೀಗೆ...

ಕೂಲಿ ಕಾರ್ಮಿಕರ
ಹಕ್ಕುಗಳಿಗಾಗಿ
ಹೋರಾಡುವ
ಕ್ರಾಂತಿಕಾರಿ ನಾಯಕ
ಸ್ವಂತಕ್ಕೊಂದು ಮನೆ
ಕಟ್ಟಿಸಲಾರಂಭಿಸಿದ...

ಮನೆ ಕಟ್ಟುವುದು
ಮುಗಿಯುವುದರೊಳಗಾಗಿ
ಕಾರ್ಮಿಕರ ಕಾಟಕ್ಕೆ
ರೋಸಿಹೋಗಿ
ಕೂಲಿ ಕಾರ್ಮಿಕರ
ವಿರೋಧಿಯಾದ...

ಮಹಿಳಾಪರ ನಿಲುವಿನ
ಪ್ರಗತಿಪರ ಯುವಕ
ಕೊನೆಗೂ ಮದುವೆಯಾದ...
ಸಂಗಾತಿಗೆ ಸಮಾನತೆ ಕೊಟ್ಟ
ಸ್ವತಂತ್ರವಾಗಿ ಬಿಟ್ಟ, ಕೊನೆಗೂ
ಶೋಷಣೆಗೊಳಗಾಗಿ ಕಂಗೆಟ್ಟ....

ಬಂದವಳು ತಂದೇ
ಆಗಬೇಕೆಂದಳು..
ಮಾತಿಗೆ ಮಾತು,
ವಾದಕ್ಕೆ ಪ್ರತಿವಾದ....
ಹರಿಣವೊಂದು ಹುಲಿ
ಪಳಗಿಸುವ ಪರಿ ಕಂಡು
ಮಹಿಳಾ ವಿರೋಧಿಯಾದ...

ಸೆಳುವಿಗೆ ಸಿಕ್ಕವನಿಗೆ
ಗೊತ್ತು ಸುಳಿಯ ತಾಕತ್ತು..
ಚಕ್ರವ್ಯೂಹ ಹೊಕ್ಕವನಿಗೆ
ಗೊತ್ತು ಶಡ್ಯಂತ್ರಗಳ ಮಸಲತ್ತು...
ತೀರದಿನಿಂತು ಸಾಗರ ನೋಡುಗನಿಗೇನು
ಗೊತ್ತು ಅದರಾಳದ ಹಿಕಮತ್ತು...

ಭಾಷಣಕ್ಕೂ ಬದುಕಿಗೂ
ಭಾರೀ ಅಂತರವಿದೆ..
ಆಶಯಕ್ಕೂ ಮೀರಿದ
ಅತಿಶಯ ಬದುಕಲ್ಲಿದೆ....
ಹೋರಾಟ ಕ್ರಾಂತಿಗಳು
ಕಲಿಸದಂತ ಪಾಠ
ಬದುಕು ಕಲಿಸುತ್ತದೆ....

- ಶಶಿ ಯಡಹಳ್ಳಿ

ಸಖಿ ಗೀತೆ....315

ಸಖಿ....

ಸುದೀರ್ಘ ಕಾಲಾವಧಿ
ಮತ್ತು
ಅಸಾಧ್ಯ ಒತ್ತಡಗಳಲ್ಲಿ

ಕಲ್ಲಿದ್ದಲು
ವಜ್ರವಾಗುವುದು...
ಕಲ್ಲು
ಖನಿಜವಾಗುವುದು...
ತ್ಯಾಜ್ಯ
ತೈಲವಾಗುವುದು....

ಹಾಗೆಯೇ...

ಮನುಷ್ಯರೇಕೆ
ಕಾಲಕ್ರಮದಲ್ಲಿ
ಮಾಗಬಾರದು...

ಬದುಕಿನ ಒತ್ತಡಗಳಲಿ
ನೊಂದು ಬೆಂದು
ಮಹಾತ್ಮರಾಗಬಾರದು...!!

-ಯಡಹಳ್ಳಿ

ಸಖಿ ಗೀತೆ.....314

ಸಖಿ...

ಒಬ್ಬರ ಹಾಗೆ
ಇನ್ನೊಬ್ಬರಿಲ್ಲಿ
ಇರೋದಿಲ್ಲ ಯಾರೂ....

ಇಲ್ಲಿ ಎಲ್ಲರೂ
ವಿಭಿನ್ನರು
ಪ್ರತಿಯೊಬ್ಬರೂ
ಅಪೂರ್ಣರು.....

ಆದರೆ....

ಎಲ್ಲರಲ್ಲೂ
ಎಂಥದೂ ಒಂದು
ಪ್ರತಿಭೆ ಇದೆ...
ಇನ್ನೆಂಥದೋ
ಸಾಮರ್ಥ್ಯವಿದೆ...

ಇಲ್ಲಿ ಯಾವುದೂ
ವ್ಯರ್ಥವಲ್ಲ....
ಯಾರೂ
ಅಸಮರ್ಥರಲ್ಲ...

ಸಮಯ ಸನ್ನಿವೇಶ
ಪರಿಸರ ಇರಬಹುದು ಕಾರಣ..
ಮೋಡ ಮುಚ್ಚಿರಬಹುದು ಬೆಳಕ
ಬೂದಿ ಬಚ್ಚಿಟ್ಟಿರಬಹುದು ಬೆಂಕಿ...

ಕೆಟ್ಟದ್ದನ್ನ ನಿರ್ಲಕ್ಷಿಸಿ
ಒಳ್ಳೇದನ್ನು ಗುರುತಿಸಿ
ಪರಸ್ಪರ ಗೌರವಿಸುವುದರಲ್ಲಿ
ಮನುಷ್ಯತ್ವವಿದೆ....

-ಯಡಹಳ್ಳಿ

ಸಖಿ ಗೀತೆ.....313

ಸಖಿ...

ಕಳೆದು ಹೋದ
ನಿನ್ನೆಗಳ
ಛಿದ್ರ ಚಿತ್ರಗಳ
ಚಿಂತೆಯಲಿ
ಇಂದಿನ ದಿನ
ಹಾಳಾಗದಿರಲಿ....!

ಕಣ್ಬಿಡುವ
ಪ್ರತಿ ಮುಂಜಾವೂ
ಬಾಕಿ ಉಳಿದ
ಬದುಕಿನ
ಮೊದಲ ದಿನವೆಂಬುದು
ಸದಾ ನೆನಪಿರಲಿ....!!

-ಯಡಹಳ್ಳಿ

ಸಖಿ ಗೀತೆ.....312

ಸಖಿ...

ಎಲ್ಲರೂ ಕತ್ತಲೆಗೆ
ಹೆದರಿ ಬೆಳಕಿಗೆ
ಹಾತೊರೆಯುತ್ತಾರೆ...

ಪ್ರೇಮಿಗಳು ಮಾತ್ರ
ಹಗಲಲ್ಲಿ ಬೇಸರಿಸಿ
ಕತ್ತಲೆಗೆ ಕಾಯುತ್ತಾರೆ...

ಪ್ರೇಮಕ್ಕೆ ಸೇರಿದಾಗ ಕಾಮ
ಬದುಕಿಗೆ ಹೊಸ ಆಯಾಮ..
ಇದ್ದರಿರಲಿ ಪ್ರೇಮಕ್ಕೆ ಹಗಲು
ಬೆತ್ತಲಾಗಲು ಬೇಕಿಲ್ಲಿ ಇರುಳು...

ಬೆಳಕ ಬಯಸುವವರಿಗೊಂದು
ಮಾಹಿತಿ, ಕತ್ತಲಲ್ಲೇ ಜೀವ ಸೃಷ್ಟಿ..
ಬದಲಾಗಬೇಕಿದೆ ಕತ್ತಲ
ನೋಡುವ ದೃಷ್ಟಿ...!!

- ಯಡಹಳ್ಳಿ

ಸಖಿ ಗೀತೆ......311

ಸಖಿ...

ಇಷ್ಟಪಟ್ಟವರು
ಅತ್ಯಮೂಲ್ಯ
ಸಮಯವನ್ನು
ನಿನಗಾಗಿ
ವ್ಯಯಸುತ್ತಾರೆಂಬುದೇ
ಕಾಳಜಿ ಕಳಕಳಿಯ
ಸಂಕೇತ....

ತಪ್ಪು ತಿಳಿಯದೇ
ಒಪ್ಪಿಕೊಂಡುಬಿಡು
ಸುಮ್ಮನಿರಬೇಡ
ಮೀನ ಮೇಷ
ಎಣಿಸುತ....

ಏನೇ ಕೊಟ್ಟರೂ
ಕೊಳ್ಳಲಾಗದ
ಅಪರೂಪದ
ಪ್ರತಿರೂಪ
ಸಮಯ...

ಕಾಲಕಳೆದರೆ
ಸಿಕ್ಕಿದ್ದೂ ದಕ್ಕುವುದಿಲ್ಲ,
ನಿರಾಕರಣೆ
ನಿತ್ಯಗೀತೆಯಾದರೆ
ನೆಮ್ಮದಿ ಮಟಾಮಾಯ...

-ಯಡಹಳ್ಳಿ

ಸಖಿ ಗೀತೆ.....310

ಸಖಿ...

ಬದುಕಿನ
ಭಾಗವಾದ
ತಾಪತ್ರಯಗಳ
ಕುರಿತು ಸದಾ
ಕೊರಗುತ್ತಿದ್ದರವು
ಮರಿ ಹಾಕುತ್ತವೆ....

ಸಮಸ್ಯೆಗಳ
ಬಗೆಹರಿಸುವ
ದಾರಿ ಹುಡುಕಿದರೆ
ಅವಕಾಶಗಳು
ಅನಾವರಣಗೊಳ್ಳುತ್ತವೆ...

ಸಮಸ್ಯೆಗಳ
ಸವಾಲಾಗಿ
ಸ್ವೀಕರಿಸಿದರೆ
ಸೋಲಿಗೆಲ್ಲಿ ಜಾಗ...?

ಗೆಲುವೊಂದೇ
ಗುರಿಯಾದಾಗ ಬೇರೆ
ಗುಮಾನಿಯಾಕೆ
ಹೊರಡಿ ಬೇಗ...!

-ಯಡಹಳ್ಳಿ

ಸಖಿ ಗೀತೆ......309

ಸಖಿ....

ಪತ್ನಿ ಎನ್ನುವ
ಪತ್ತೇದಾರಿಣಿಗೆ
ಅದೆಷ್ಟೇ ಪುರಾವೆಗಳನು
ಕೊಟ್ಟರೂ ಎಂದೂ
ಕ್ಲೀನ್ ಚಿಟ್ ಪತಿಗೆ
ಸಿಕ್ಕುವುದೇ ಇಲ್ಲ....!

ಆಕೆಯ ಸಂದೇಹಕೆ
ಕೊನೆಮೊದಲಿಲ್ಲ..
ಅನುಮಾನದ ರೋಗಕ್ಕೆ
ಮದ್ದೆಂಬುದಿಲ್ಲ......!!

* * * * *
ಪತ್ನಿಯ ಕೋರ್ಟಲ್ಲಿ
ಪತಿ ಯಾವಾಗಲೂ
ವಿಚಾರಣಾಧೀನ ಖೈದಿ..

ಅಪರಾಧಿ ಎಂದು
ಸಾಬೀತಾಗದಿದ್ದರೂ
ಸದಾ ಆರೋಪಿ
ಎಂಬ ಗುಮಾನಿ......

ಪತಿಯ ಪಾತಕ
ಸಾಬೀತು ಪಡಿಸಲು
ಸಾಕ್ಷಿ ಪುರಾವೆಗಳು
ಹುಡುಕಾಟದ ಹಂತದಲ್ಲಿವೆ....

ಪಾಪ...ಆರೋಪಿಯನ್ನು
ಅಪರಾಧಿಯಾಗಿಸುವ
ಮಹತ್ಕಾರ್ಯ
ಮುಂದುವರೆದಿದೆ....

ಸದ್ದು....
ವಿಚಾರಣೆ
ಜಾರಿಯಲ್ಲಿದೆ.......!!!!!!!!!!

-ಯಡಹಳ್ಳಿ

ಸಖಿ ಗೀತೆ......308

ಸಖಿ...

ಲೋಕದ ತುಂಬಾ
ಚೆಲುವು ಚಿತ್ತಾರದ
ಬಣ್ಣಗಳಿವೆ...
ಸುಂದರವಾದ
ಹೆಣ್ಣುಗಳೂ ಇವೆ....

ಜೊತೆಗೆ...
ಕಂಡಿದ್ದನ್ನೆಲ್ಲಾ ದಕ್ಕಿಸಿ
ಕೊಳ್ಳಬಯಸುವ
ಕಾಮುಕ
ಕಣ್ಣುಗಳೂ ಇವೆ....

ನೋಡಿ ಆನಂದಿಸಿ
ಅಭಿನಂದಿಸುವ ಬದಲು
ಅನುಭವಿಸ ಬಯಸುವುದು
ಸ್ವಾರ್ಥಿ ಮನಸಿನ
ವಿಕೃತ ಗಮಲು...

ವಿಕಾರಗಳೇ
ಸಾಕಾರಗೊಳ್ಳುತ್ತಿರುವ
ದಿನಮಾನಗಳಲಿ
ಎಲ್ಲಿ ನೋಡಿದರಲ್ಲಿ
ಬರೀ ದಿಗಿಲು...!!

-ಯಡಹಳ್ಳಿ

ಸಖಿ ಗೀತೆ......307

ಸಖಿ...

ಆಳುವ ವ್ಯವಸ್ಥೆ
ಸೃಷ್ಟಿಸುವ ಅಪಾರ
ದುರಂತಗಳಲಿ...

ಆಳುವವರ ಊಳಿಗದಲ್ಲಿರುವ
ಕವಿ, ಕಲಾವಿದ
ಬುದ್ದಿಜೀವಿಗಳ
ಪಾಲೂ ಇದೆ......

ಸತ್ತನಂತರವೂ
ಜನರೆದೆಯಲಿ
ಬದುಕಿರಬೇಕೆಂದರೆ....

ಧಣಿಗಳ ದಬ್ಬಾಳಿಕೆ
ಧಿಕ್ಕರಿಸಿ...
ದಮನಿತರ ಬಾಳಿಗೆ
ಬೆಂಗಾವಲಾಗುವ
ಸವಾಲಿದೆ....

-ಯಡಹಳ್ಳಿ

ಸಖಿ ಗೀತೆ....... 306

ಸಖಿ...

ಶತಮಾನಗಳಿಂದ
ಹೆಣ್ಣು ಅದೆಷ್ಟೋ
ಅಬ್ಬರಿಸಿ ಹರಿದರೂ
ನಿರಂತರ ಚಲನೆಯ
ನದಿಯಾಗಲಿಲ್ಲ....
ನಿರುಮ್ಮಳವಾಗಿ
ಸಾಗರ ಸೇರಲಿಲ್ಲ...!

ಹೆಜ್ಜೆ ಹೆಜ್ಜೆಗೆ
ಯಜಮಾನರುಗಳ
ತಡೆಗೋಡೆಗಳು,
ಸಿಕ್ಕಸಿಕ್ಕಲ್ಲಿ ಮನುವಾದಿ
ಕಟ್ಟುಪಾಡುಗಳು.....

ಮಿಂದವರೆಷ್ಟೋ
ಮೇಯ್ದವರೆಷ್ಟೋ
ಬಳಸಿ ಬಿಸಾಕಿದವರೆಷ್ಟೋ
ಮಲಿನಗೊಳಿಸಿ ಮೂಗು
ಮುಚ್ಚಿಕೊಂಡವರೆಷ್ಟೋ....

ಅಟ್ಟಹಾಸಕ್ಕೆ ಹೆಣ್ಣು
ನಲುಗಿಹೋಗಿದೆ...
ಮೇಲ್ನೋಟಕ್ಕೆ ನದಿ
ನಿಂತ ನೀರಾಗಿದೆ...
ಆದರೆ.. ಅಂತರಂಗದಲ್ಲಿ
ಅಂತರಗಂಗೆ ಉಕ್ಕುತ್ತಿದೆ.....

ಯಾರಿಗೂ ಗೊತ್ತಿಲ್ಲ
ಯಾವಾಗ ಜಲಪ್ರಳಯ...
ಆಗ ಚಿಂದಿಯಾಗುವುದು ಖಚಿತ
ಮನುಪುರುಷರ ಪಾಳಯ.......!!!

-ಯಡಹಳ್ಳಿ

ಮಂಗಳವಾರ, ಜೂನ್ 9, 2015

ಸಖಿ ಗೀತೆ.....305

ಸಖಿ...

"ಇಲ್ಲೇ ಇರಲೇ
ಸಾಕು ಸುಮ್ಮನ
ಎಲ್ಲಿ ಹೋದರರ
ಏನೈತಿ ಮಗನ...
ಅದ ದುಡಿತ
ಮತ್ತದ ಮಿಡಿತ...

ಹಳ್ಳೀಲಿದ್ರ
ಸಂಬಂಧಗಳಾದ್ರೂ
ಉಳೀತಾವ...
ಸಿಟೀಲೇನೈತಿ
ಮನುಷ್ಯತ್ವಾನ
ಸತ್ತುಹೋಗತಾವ...."

ಅಂತೆಲ್ಲಾ ಅಪ್ಪ
ಕಕ್ಕುಲಾತಿಯಿಂದ
ಹೇಳಿದಾ ಕೇಳಲಿಲ್ಲ....

ಈಗ ಸಿಟಿಎಂಬೋ
ಸಾಗರದಾಗ
ಯಾರಿಗ್ಯಾರೂ ದಿಕ್ಕಿಲ್ಲದ
ಅನಾಥ ಪ್ರೇತಾತ್ಮದಂಗ
ಅಲೀತಿದ್ದೀನಿ, ಅಪ್ಪ
ಹೇಳಿದ ಮಾತು
ಪ್ರತಿ ಕ್ಷಣ
ನೆನೀತಿದ್ದೀನಿ....

-ಯಡಹಳ್ಳಿ

ಸಖಿ ಗೀತೆ.....304

ಸಖಿ...

ಮಾಡುವುದಿದ್ದರೆ
ಮಾಡಿಕೊಳ್ಳೋಣ
ದಿನಂಪ್ರತಿ
ಸ್ನಾನ ಮೈಯಿಗೆ.....

ಅದಕ್ಕಿಂತ ಮೊದಲು
ತೊಳೆದುಕೊಳ್ಳೋಣ
ಪ್ರತಿಕ್ಷಣ
ಮನದ ಮೈಲಿಗೆ.....!!

-ಯಡಹಳ್ಳಿ

ಸಖಿ ಗೀತೆ....303

ಸಖಿ...

ಏನಿದೆ
ಈ ಜೋಗಿಯ
ಜೋಳಿಗೆಯಲಿ
ಬರೀ ತೂತು.....!

ಆದರೂ... ಊರಿಗೆ
ಹಂಚುವಷ್ಟಿದೆ
ಹೋಳಿಗೆಯಂತಾ
ಸಿಹಿ ಮಾತು.....!!

ಅಲೆಮಾರಿ
ಜಂಗಮನ
ಸಂಗಮದಲ್ಲಿ
ಸುಖವೆಂಬುವುದಿಲ್ಲ.....!!!

ಬಯಲಲಿ
ಬೆಳಕು
ಕಂಡವನಿಗೆ
ದುಃಖವೆಂಬುದಿಲ್ಲ...!!!!

-ಯಡಹಳ್ಳಿ

ಸಖಿ ಗೀತೆ....302

ಸಖಿ....

ಅಳುವವರ
ಕಣ್ಣೀರಿನ
ಕುರಿತು ಕಾವ್ಯ
ಬರೆ ಬರೆದು
ಪ್ರಸಿದ್ಧನಾದ ಕವಿ...

ಆಳುವವರ
ಊಳಿಗ ಸೇರಿ
ಪಡೆದು ಪಾವನನಾದ
ಅನೇಕಾನೇಕ
ಅಧಿಕಾರ ಪುರಸ್ಕಾರ
ಪ್ರಶಸ್ತಿ ಪದವಿ.......!!

- ಯಡಹಳ್ಳಿ

ಸಖಿ ಗೀತೆ.... 301

ಸಖಿ..

ಎಲ್ಲ ಅಡ್ಡಗೋಡೆ
ಕಟ್ಟುಪಾಡುಗಳ
ಧಿಕ್ಕರಿಸಿ
ಬಯಲಲ್ಲಿ
ಬೆಳಕು
ಕಾಣುವವ
ಜೋಗಿ.......!

ಸಕಲೆಂಟು
ಮೋಹಗಳ ಸುತ್ತ
ಬಯಕೆಗಳ
ಹುತ್ತ ಕಟ್ಟಿ
ಭ್ರಮೆಯಲ್ಲಿ
ಬದುಕು
ಬಂಧಿಸಿದವ
ಭೋಗಿ.....!!

- ಯಡಹಳ್ಳಿ

ಸಖಿ ಗೀತೆ....300

ಸಖಿ..

ಸುಖ
ಶಾಂತಿ
ನೆಮ್ಮದಿಯ
ಬದುಕಿಗೆ
ಒಂದಿದೆ
ವಿರಳ ದಾರಿ...

ಯಾವಾಗಲೂ
ನಕಾರಾತ್ಮಕ
ನಡೆ ನುಡಿ
ಆಲೋಚನೆಗಳಿಂದ
ದೂರವಿರಿ.....!!

- ಯಡಹಳ್ಳಿ

ಸಖಿ ಗೀತೆ.....299

ಸಖಿ.....

ಕವಿಗಳಿಗಿರಬೇಕು ಬದ್ದತೆ
ಓದುಗರಿಗೂ ಬೇಕು ಸಿದ್ದತೆ.....
ಕವಿತೆಗಳೇನು ಸುಮ್ಮನೇ ಸಿಕ್ಕುವುದೇ
ಓದಿದಾಕ್ಷಣ ಕವನ ದಕ್ಕುವುದೇ.....?

ಈ ಕವಿತೆಗಳೇ ಹೀಗೆ
ದಕ್ಕಿದಷ್ಟು ದಕ್ಕಿಸಿಕೊಳ್ಳಬೇಕು...
ಸಿಕ್ಕಷ್ಟು ಅರಗಿಸಿಕೊಳ್ಳಬೇಕು
ಅರ್ಥವಾಗದಿದ್ದರೂ ಯತ್ನಿಸಬೇಕು....

ಆದರೆ...ಯಾರಿಗುಂಟು ಸಮಯ
ಕಾವ್ಯದಾಳಕ್ಕಿಳಿದು ಸಂಕೇತ ಒಡೆದು
ರೂಪಕ ಶಬ್ದಸಾಗರ ಕಡೆದು
ಕಾವ್ಯಾಮೃತ ಸವಿಯುವ ಆಶಯ....!

ಕಾವ್ಯಕನ್ನಿಕೆ ಬರೀ ಕವಿಗಳಿಗಲ್ಲ
ಕಾವ್ಯಾಸಕ್ತರಿಗೂ ಒಲಿಯಬೇಕು...
ಕಾವ್ಯಲೋಕದ ವಿಹಾರಿಗಳಿಗೆಲ್ಲ
ಅಧಮ್ಯ ಅನುಭಾವ ದಕ್ಕಬೇಕು...!!

-ಯಡಹಳ್ಳಿ

ಸಖಿ ಗೀತೆ.....298

ಸಖಿ..

ಬದುಕುಪೂರಾ
ಹುಡುಕಾಟದಲಿ
ಕಾಲಕಳೆದರೇನು
ಪ್ರಯೋಜನ...?

ರೂಪಿಸಿಕೊಳ್ಳಬೇಕಾಗಿದೆ
ನಮ್ಮಿಚ್ಚೆಯಂತೆ
ಇರುವುದೊಂದೇ
ಜೀವನ....!

ಯಾರೋ ಹಾಕಿದ
ರಾಗಸ್ವರಕೆ
ದ್ವನಿಯಾದರೆಂತಾ
ಗಾಯನ....!!

ಹೊಸಹೊಸ ರಾಗ
ಸ್ವಯಂ ಸೃಷ್ಟಿಸಿ
ಸಂಯೋಜಿಸಬೇಕಿದೆ
ಅನುದಿನ...!!!

-ಯಡಹಳ್ಳಿ

ಸಖಿ ಗೀತೆ......297

ಸಖಿ...

ಈತನ ಮನೆ
ಮುರಿದ ಆಕೆ
ಬೇರಲ್ಲೋ ಹೋಗಿ 
ಕಟ್ಟಿಕೊಂಡಳು
ಬದುಕು...

ಆಕೆಯೊಳತಿಗಾಗಿ
ಹಣತೆಯಾಗಿ
ಬದುಕು ಸುಟ್ಟುಕೊಂಡ
ಈತನ ಮನೆ -ಮನ
ಬರೀ ಕತ್ತಲು...

ಅಪಾತ್ರರಿಗೆ ಮಾಡಿ ದಾನ
ಪುಣ್ಯವ ಹುಡುಕಿದರೇನು...?
ಪಾಪಪ್ರಜ್ಞೆ ಇಲ್ಲದವರಿಗಾಗಿ
ಪರಿತಪಿಸಿ ಫಲವೇನು...?

-ಯಡಹಳ್ಳಿ