ಶುಕ್ರವಾರ, ಜನವರಿ 31, 2014

ಮನೆಗೆ ಬಂದ ಹೆಣ್ಣು - ಕೆ.ಎಸ್.ಎನ್ ಕವಿತೆ













ಮೊದಲ ದಿನ ಮೌನ
ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ
ಇಷ್ಟು ನಗು, ಮೂಗುತಿಯ
ಮಿಂಚು ಒಳ ಹೊರಗೆ.
ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ

ಮೂರನೆಯ ಸಂಜೆ ಹೆರಳಿನ ತುಂಬ
ದಂಡೆ ಹೂ
ಹೂವಿಗೂ ಜೀವ ಬಂದಂತೆ
ಸಂಜೆಯಲಿ ರಾತ್ರಿ  ಇಳಿದಂತೆ,
ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ.

-ಕೆ.ಎಸ್.ನರಸಿಂಹಸ್ವಾಮಿ

(ಈ ಕವಿತೆಯಲ್ಲಿ ರೂಪಕಗಳ  ಸಾಲು ಸಾಲು ಮೆರವಣಿಗೆ ಇದೆ. ಸಂಕೇತಗಳ ಸರಮಾಲೆ ಇದೆ. ಮದುವೆಯಾಗಿ ಗಂಡನ ಮನೆಗೆ ಬಂದ ನವವಧುವಿನ ತಲ್ಲಣ ತಳಮಳ ಸಂತಸಗಳ ಅನುಭಾವ ಗೀತೆ ಇದೆ. ಕೆ.ಎಸ್.ಎನ್ ರವರ  ಉತ್ತಮ ಪ್ರೇಮ ಕವಿತೆಯಲ್ಲಿ ಇದು ಒಂದು. )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ