ಸತ್ಯಕ್ಕೆ ಸಾವಿಲ್ಲ ಎನ್ನುವವರು
ಸಾವಿನ ತಾವು
ಸೇರುವವರೆಗೂ
ಮಿತ್ಯದಲ್ಲೇ ಬದುಕುವರು.
ನಾವು ನಂಬಿಕೊಂಡ ಸತ್ಯ
ಸುಳ್ಳೆಂದು ಅರಿವಾದಾಗ
ಸತ್ಯಕ್ಕೂ ಸಾವುಂಟು.
ನಂಬಿಕೆ ಅಪನಂಬಿಕೆಗಳ
ನಡುವೆ ಹುಡುಕಾಟ ನಿರಂತರ
ಪರಮಸತ್ಯವೆಂಬುದು ಎಲ್ಲುಂಟು?
ಇವರ ಸತ್ಯ
ಅವರಿಗೆ ಮಿತ್ಯ
ಅವರವರ ಸತ್ಯ
ಅವರವರಿಗೆ
ಸತ್ಯ ದಕ್ಕುವುದೇ ಭಾವ ಬಕುತಿಗೆ?
ಅಂದಿನ ನಿಜ ಇಂದಿಗೆ ಹುಸಿ
ಇಂದಿನ ದಿಟ ನಾಳೆಗೆ ಹಳಸಿ
ಕೊನೆಗುಳಿವುದು ಸತ್ಯ-ಸುಳ್ಳುಗಳ ಸುಳಿ.
ನೀವು ನಂಬಿದ
ಸತ್ಯ ನೀವಿಟ್ಟುಕೊಳ್ಳಿ
ನನ್ನ ನಂಬಿಕೆ
ನನ್ನದಾಗಿರಲಿ.
ಒಬ್ಬರ ನಂಬಿಕೆ
ಇನ್ನೊಬ್ಬರಿಗೆ ಹೇರಿಕೆಯಾಗದಿರಲಿ.
ಕಾಲ ಚಲಿಸುತ್ತಿಲ್ಲ,
ಬದುಕು ಚಲಿಸುತ್ತಿದೆ.
ಬದುಕು ಬದಲಾದರೂ ಕಾಲ ಇದ್ದಲ್ಲೆ ಇರುತ್ತದೆ.
ಬದುಕಿನ ಭ್ರಮೆಗಳಾಚೆಗೂ ಸತ್ಯ ಒಂದಿದೆ.
ಎಲ್ಲಾ ಭ್ರಮೆಗಳನ್ನು ಕಳಚಿ ಬಯಲಾಗಿಬಿಡಿ
ನಂಬಿಕೆಗಳ ಗೋರಿಯ
ಮೇಲೆ ಬರೆದುಬಿಡಿ
''ಸಾವೊಂದೇ ಅಂತಿಮ ಸತ್ಯ''.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ