ಕಾವ್ಯ ವ್ಯಕ್ತಿಯೊಬ್ಬನ ಅನುಭವಜನ್ಯ ಸೃಜನತೆಯಾದರೂ
ಅದು ಸಮಾಜದ ಜೊತೆಗೆ ಯಾವಾಗಲೂ ಅನುಸಂಧಾನದಲ್ಲಿ ತೊಡಗಿರುತ್ತದೆ. ವ್ಯಕ್ತಿಗತ ಸೃಜನಶೀಲತೆ ಸಮಾಜಮುಖಿಯಾದಾಗ
ಅದು ಸಾರ್ವಜನಿಕಗೊಳ್ಳುತ್ತದೆ. ಆದರೆ ಮೊದಮೊದಲು ಕಾವ್ಯಕೃಷಿಗೆ
ತೊಡಗಿದವರಿಗೆ, ತಮ್ಮ ಎದೆಯಾಳದ ಹಸಿಬಿಸಿ ಬಯಕೆ ಭಾವನೆಗಳನ್ನು ಬರವಣಿಗೆಯಲ್ಲಿಳಿಸಿದವರಿಗೆ ಸಣ್ಣದೊಂದು ಆತಂಕ ಎದುರಾಗುತ್ತದೆ. ನಾನು ಬರೆದದ್ದು ಕಾವ್ಯವಾ?
ಇದರಲ್ಲಿ ಕವಿತೆಯ ಲಕ್ಷಣಗಳಿವೆಯಾ? ನನ್ನ ಕವಿತೆ ಪ್ರಕಟಗೊಳ್ಳುವ
ಯೋಗ್ಯತೆ ಹೊಂದಿದೆಯಾ? ಯಾರು ಪ್ರಕಟಿಸುತ್ತಾರೆ? ಹೇಗೆ ಜನರಿಗೆ ನನ್ನ ಮನದ ಭಾವನೆಯ ಕೂಸಾದ ಕವಿತೆಗಳನ್ನು ತಲುಪಿಸುವುದು? ಹೀಗೆ.... ಹಲವು ಪ್ರಶ್ನೆಗಳು
ಉದಯೋನ್ಮುಖ ಕವಿ / ಕವಿಯತ್ರಿಯರನ್ನು ಕಾಡುತ್ತವೆ.
ಬರೆದದ್ದೆಲ್ಲಾ
ಕಾವ್ಯವಾಗಲಾರದು, ಕಾವ್ಯವಾಗಿದ್ದೆಲ್ಲಾ ಪ್ರಕಟವಾಗಲಾರದು, ಪ್ರಕಟಗೊಂಡಿದ್ದೆಲ್ಲಾ ಜನರಿಗೆ ತಲುಪಲಾರದು.
ಇದಕ್ಕೆ ಸಮಾನ ಮನಸ್ಕರ ವೇದಿಕೆಯೊಂದು ಅತ್ಯಗತ್ಯವಾಗಿದೆ. ಕವಿತೆಗಳ ಬರವಣಿಗೆ ಮತ್ತು ಅಭಿವ್ಯಕ್ತಿಯ
ಕುರಿತು ಮಾಹಿತಿಯನ್ನು ಕೊಡಲು, ಕಾವ್ಯದ ಹಲವು ಮಾದರಿಯನ್ನು ತಿಳಿಸಲು, ಹಿರಿಯ ಕವಿಗಳ ಅನುಭವಗಳನ್ನು
ಹಂಚಿಕೊಳ್ಳಲು, ಬರೆದ ಕವನಗಳನ್ನು ಸಕಾರಾತ್ಮಕವಾಗಿ ವಿಶ್ಲೇಷಿಸಲು, ಕಾವ್ಯ ಲೋಕದ ಹಲವು ಆಯಾಮಗಳನ್ನು
ತಿಳಿಸಿಕೊಡಲು ಉದಯೋನ್ಮುಖ ಕವಿಗಳ ವೇದಿಕೆಯೊಂದು ಬೇಕಾಗಿದೆ.
ಪ್ರಸಿದ್ಧ ಕವಿಗಳ ಕವನಗಳ ಪ್ರಕಟನೆಗೆ ಮುದ್ರಣ ಮಾಧ್ಯಮಗಳು
ಅತೀ ಹೆಚ್ಚು ಆದ್ಯತೆ ಕೊಡುತ್ತವೆ. ಅದು ಸಹಜವೂ ಆಗಿದೆ. ಕೆಲವು ಕವಿಗಳು ತಮ್ಮದೇ ಗುಂಪನ್ನು ಮಾಡಿಕೊಂಡು ತಮ್ಮ ಹಿತಾಸಕ್ತಿಗಳನ್ನು
ಕಾಪಾಡಿಕೊಂಡಿದ್ದಾರೆ. ಅದು ಅವರ ಜರೂರತ್ತಾಗಿದೆ. ಆದರೆ
ಹೊಸದಾಗಿ ಕವಿತೆ ಬರೆಯುವವರಿಗೆ, ಈಗಾಗಲೇ ಹಲವಾರು ಕವಿತೆಗಳನ್ನು ಬರೆದರೂ ಎಲೆ ಮರೆಯ ಕಾಯಿಯಂತಿರುವ
ಕವಿಗಳಿಗೆ, ಒಂದೆರಡು ಕವನ ಸಂಕಲನಗಳನ್ನು ಹೊರತಂದರೂ ಜನರಿಗೆ ತಲುಪಲು ಸಾಧ್ಯವಾಗದವರಿಗೆ.... ಹಾಗೂ
ಕವಿತಾ ಸೃಷ್ಟಿಯಲ್ಲಿ ಆಸಕ್ತಿ ಇರುವ ಎಲ್ಲರಿಗಾಗಿ "ಕಾವ್ಯ ಸೃಷ್ಟಿ ವೇದಿಕೆ' ಎನ್ನುವ ಒಂದು ಬ್ಲಾಗ್
ವೇದಿಕೆಯನ್ನು ಆರಂಭಿಸುತ್ತಿದ್ದೇವೆ.
ಈ ಇಂಟರನೆಟ್ 'ಕಾವ್ಯ ಸೃಷ್ಟಿ ವೇದಿಕೆ'ಯಲ್ಲಿ ಯಾರು ಬೇಕಾದರೂ
ಕವಿತೆಯನ್ನು ಪ್ರಕಟಿಸಬಹುದಾಗಿದೆ. ಇಲ್ಲಿ ಹಿರಿಯ ಕವಿಗಳ ಕವಿತೆಗಳು ಉದಯೋನ್ಮುಖ ಕವಿಗಳಿಗೆ ಮಾದರಿ ರೂಪದಲ್ಲೂ ಆಗಾಗ ಪ್ರಕಟಗೊಳಿಸುವ
ಆಶಯವಿದೆ. ಕವಿತೆ ಕುರಿತ ಲೇಖನಗಳು, ಕಾವ್ಯ ಕೃಷಿ ಕುರಿತ ಅನುಭವದ ಬರವಣಿಗೆಗಳನ್ನು ಪ್ರಕಟಿಸುವ ಬಯಕೆಯಿದೆ. ಒಟ್ಟಾರೆಯಾಗಿ ಈ ವೇದಿಕೆ ಕಾವ್ಯಸೃಷ್ಟಿಗೆ ಪೂರಕವಾಗಿ
ಹೊರಹೊಮ್ಮಲಿ ಎನ್ನುವ ಹಿರಿದಾಸೆ ನಮ್ಮದು.
ಎಲ್ಲಾ
ಬಗೆಯ ಕವಿತೆ, ಹನಿಗವನ, ಅನುವಾದಿತ ಕವನ, ಶಾಯರಿಗಳು, ಗಜಲ್ ಗಳು, ಸಿನೆಮಾ ಹಾಡುಗಳು, ಭಾವಗೀತೆಗಳನ್ನು
ಈ ಭ್ಲಾಗ್ ವೇದಿಕೆ ಆಹ್ವಾನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ