ಮಹಿಳೆಯನ್ನು
ತಂದೂರಿಯಲ್ಲಿ ಸುಟ್ಟವರು,
ಬಸ್ಸಿನಲ್ಲಿ ಬೆತ್ತಲಾಗಿಸಿ
ಅತ್ಯಾಚಾರಗೊಳಿಸಿ ಕೊಂದವರು,
ಮನೆಮನೆಗಳಲಿ ದಂಡಿಸಿ
ಹಿಂಸಿಸುವವರು,
ಕಂಡಲ್ಲೆಲ್ಲಾ ಉಬ್ಬುತಗ್ಗುಗಳ
ಅಳತೆ ಮಾಡುವವರು,
ಮೋಜು ಮೇಜುವಾಣಿಗಳ
ಸ್ಕಿಂ ಹಾಕುವವರು,
ಬೀದಿಯಲ್ಲಿ ಆಸಿಡ್ ಹಾಕಿ
ವಿರೂಪಗೊಳಿಸಿದವರು,
ಪ್ರೇಮದ ಹೆಸರಲ್ಲಿ
ಮೋಸಗೊಳಿಸಿದವರು,
ಧನದಾಸೆಗೆ ದೇಹವ
ಇಡಿಯಾಗಿ ಮಾರಿದವರು,
ಬಾಯ್ತೆಗೆದರೆ ಸ್ತ್ರೀವಿರೋಧಿ
ಬೈಗುಳ ಬೈಯುವವರು,
ಬಳಸಿ ಬಿಸಾಕಿದವರು
ಬಂಧಿಸಿ ಆಳಿದವರು.
ಹೀಗೆ ಸಕಲೆಂಟು
ಪಾಪಪ್ರಜ್ಞೆಯಿಂದ
ತಲೆತಗ್ಗಿಸಬೇಕಾದ
ಪುರುಷ ಪುಂಗವರು....
ಪ್ರತಿ ವರ್ಷ ತಪ್ಪದಂತೆ
ಮಾರ್ಚ ಎಂಟರಂದು
ಮಹಿಳಾ ದಿನಾಚರಣೆ
ಆಚರಿಸುತ್ತಾರೆ.
ಮಹಿಳಾಪರ ಲೇಖನ
ಬರೆಯುತ್ತಾರೆ.
ಸ್ತ್ರೀವಾದಿ ಭಾಷಣ
ಬಿಗಿಯುತ್ತಾರೆ.
ಮರುದಿನದಿಂದ ಮತ್ತದೆ
ಮಹಿಳಾ ಶೋಷಣೆ,
ಮಾತುಮಾತಿಗೂ ಬರೀ ದೂಷಣೆ.
ಅವಕಾಶ ಸಿಕ್ಕರೆ ಆಪೋಷಣೆ.
ನನಗೆ ಮಹಿಳಾ ದಿನಾಚರಣೆ
ಆಚರಿಸಬೇಕೆನಿಸುತ್ತಿಲ್ಲ,
ನಾಚಿಕೆಯಿಂದ
ತಲೆತಗ್ಗಿಸಬೇಕೆನಿಸುತ್ತಿದೆ.
ಸಮಸ್ತ ಮಹಿಳೆಯರಲ್ಲಿ
ಕ್ಷಮೆಯಾಚಿಸಬೇಕೆನಿಸುತ್ತದೆ.
ನನ್ನ ಗಂಡು ಜಾತಿಯವರು ಮಾಡಿದ
ಶೋಷಣೆಗೆ ಅಸಹ್ಯಪಡಬೇಕೆನಿಸುತ್ತಿದೆ.
ಮಹಿಳೆಯಿಲ್ಲದೆ
ಬದುಕಿಲ್ಲ ಭಾವವಿಲ್ಲ,
ಜಗವಿಲ್ಲ ಜೀವವಿಲ್ಲ
ಅಸ್ತಿತ್ವವೇ ಮೊದಲಿಲ್ಲ.
ಬದುಕೆಲ್ಲಾ ಮಹಿಳೆಯರ
ಸೇವೆ ಮಾಡಿದರೂ
ಆಕೆಯ ಋಣ ತೀರಿಸಲು
ಸಾಧ್ಯವೇ ಇಲ್ಲ.
ಅವಳ ಪಾದಾರವಿಂದದಲ್ಲಿ
ಮಿಂದೆದ್ದರೂ ನಾವು
ಶತಮಾನಗಳಿಂದ ಮಾಡಿದ
ಪಾಪಕ್ಕೆ ಪರಿಹಾರವಿಲ್ಲ.
ಕ್ಷಮೆಯಿರಲಿ ಮಹಿಳೆಯರೇ
ನಿಮ್ಮ ಕುಲಕಂಠಕರು ನಾವು,
ಕ್ಷಮೆಯಿರಲಿ ಜನನಿಗಳೇ
ನಿಮ್ಮ ಕುಲಪಾತಕರು
ನಾವು.
ಕ್ಷಮಯಾ ಧರಿತ್ರೀ ಎಂದು
ನಿಮ್ಮನ್ನು ವಂಚಿಸುತ್ತಲೇ ಬಂದಿದ್ದೇವೆ.
ಆದರೂ ಕ್ಷಮಿಸಿಬಿಡಿ
ಕರುಣೆಇರಲಿ ಈ ಕಟುಕರ ಮೇಲೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ