ಸೋಮವಾರ, ಮಾರ್ಚ್ 10, 2014

ಹರಕೆಯ ಕುರಿಗಳು :











ರಾಜಕೀಯ ವಿಧಾನಸೌಧದಲ್ಲಿಲ್ಲ
ಈಗ  ಮನೆ ಮನಗಳೊಳಗೇ
ಅಕ್ಟೋಪಸ್ ನಂತೆ ಪಸರಿಸಿದೆ
ವೈರಸ್ ನಂತೆ ಹಬ್ಬಿನಿಂತಿದೆ
ಜನರೆಲ್ಲಾ ಹರಕೆಯ ಕುರಿಗಳು.

ರಾಜಕೀಯ ನಮಗೆ ಸಂಬಂಧಿಸಿದ್ದಲ್ಲ
ಎನ್ನುವಂತಿಲ್ಲ ನಿರ್ಲಕ್ಷಿಸುವಂತಿಲ್ಲ
ನಿಮಗೆ ಬೇಕೋ ಬೇಡವೋ
ನಿಮ್ಮ ಪಾಲಿಗೆ ನೀವು ಸುಮ್ಮನಿರುವಂತಿಲ್ಲ
ಯಾಕೆಂದರೆ ಎಲ್ಲರೂ ಹರಕೆಯ ಕುರಿಗಳು.

ಹೇಗಿರಬೇಕು ಎಲ್ಲಿರಬೇಕು ಏನುಮಾಡಬೇಕು
ಎಂತದ್ದು ಯೋಚಿಸಬೇಕು ಎಲ್ಲವನ್ನೂ
ಅಗೋಚರ ಶಕ್ತಿ ನಿರ್ಧರಿಸುತ್ತದೆ.
ಅದರ ವ್ಯಾಪ್ತಿ ಶಕ್ತಿಕೇಂದ್ರದಿಂದ ಬೇರಿಗಿಳಿದಿದೆ.
ಬಲಿಯಾಗುತ್ತಿವೆ ಹರಕೆಯ ಕುರಿಗಳು.

ಓಟು ಕೊಟ್ಟರೆ ಕೆಲಸ ಮುಗಿಯಿತು
ಎಂದುಕೊಳ್ಳುವುದೆಲ್ಲಾ ಹಸಿ ಸುಳ್ಳು,
ನಂತರ ನಡೆವ ದೊಡ್ಡಹೊಟ್ಟೆ ದೇವರುಗಳ
ಮಹಿಮೆ ಬಲ್ಲವನೇ ಬಲ್ಲ, ತಿಳಿಯದೇ
ಕೊರಳ ತಳಿರು ತಿನ್ನುತ್ತಿವೆ ಹರಕೆಯ ಕುರಿಗಳು.

ಕಿಟಿಕಿ ಬಾಗಿಲುಗಳ ಭದ್ರಪಡಿಸಿದರೂ
ಗಾಳಿಯಲ್ಲಿ ಹಾರಿ, ನಿರ್ವಾಣದಲಿ ತೂರಿ
ಬದುಕುಗಳ ನಿಯಂತ್ರಿಸುವ ಕಸಬುದಾರಿಕೆ
ಕಲಿತ ಕಲಿಗಳ ತಂತ್ರಗಾರಿಕೆ ಅರಿಯದೇ
ಬಲಪೀಠ ಆರಾಧಿಸುತ್ತವೆ ಹರಕೆಯ ಕುರಿಗಳು.

ಅಲ್ಲಿ ಭಾವನೆಗಳಿಲ್ಲ ಬದಲಿಸುವ ಬಣ್ಣಗಳಿವೆ,
ಅಲ್ಲಿ ಬದುಕಿಲ್ಲ ಹಾರಾಡುವ ಬಾವುಟಗಳಿವೆ.
ಅಲ್ಲಿ ಅಂತಃಕರಣವಿಲ್ಲ ಈಡೇರದ ಆಶ್ವಾಸನೆಗಳಿವೆ.
ಅಲ್ಲಿ ಯೋಚನೆಗಳಿಲ್ಲ ಬರೀ ಯೋಜನೆಗಳಿವೆ....
ಎಲ್ಲ ನೋಡಿ ಜೊಲ್ಲು ಸುರಿಸುತ್ತಿವೆ ಹರಕೆಯ ಕುರಿಗಳು.

ಅವನಬಿಟ್ಟು ಇವನಬಿಟ್ಟು ಅವನ್ಯಾರು...
ಎಂಥಾ ಸೊಗಸಿನಾಟ, ಕಾಯಿ ಬದಲಾದರೂ ಆಟಬದಲಾಗದು,
ವ್ಯಕ್ತಿ ಬದಲಾದರೂ ವ್ಯವಸ್ಥೆ ಬದಲಾಗದು...
ಜೂಜಿನಾಟದ ಮಾಟದಲ್ಲಿ ಮೈಮರೆತು
ನಲಿಯುತ್ತಿವೆ ಹರಕೆಯ ಕುರಿಗಳು.

ಈ ದೊಡ್ಡ ಹೊಟ್ಟೆ ದೇವರುಗಳ ಹಿಂದೆ
ಕಾರ್ಪೋರೇಟ್ ದೇವರುಗಳಿದ್ದಾವೆ.
ಅವುಗಳ ಹಿಂದೆ ಜಾಗತಿಕ ದೇವರಿದ್ದಾವೆ.
ಈ ಎಲ್ಲಾ ಅಗೋಚರ ದೇವರುಗಳ
ಸುಲಿಗೆಗೆ ಬಲಿ ಹರಕೆಯ ಕುರಿಗಳು.

-ಶಶಿಕಾಂತ ಯಡಹಳ್ಳಿ









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ