ಶುಕ್ರವಾರ, ಮಾರ್ಚ್ 14, 2014

ಮರಣ ಪತ್ರ :














ಸರ್ವಕಾಲಕ್ಕೂ
ಸಲ್ಲುವಂತ ಪ್ರೀತಿಗೆ
ತಡೆಯಾತಕೆ.

ಎಲ್ಲಕಾಲಕೂ
ಇರುವಂತ ಜಾತಿಗೆ
ಮಣೆಯಾತಕೆ.

ಮನಮನವು
ಬೆರೆತು ಒಂದಾಗಲು
ಅಪ್ಪಣೆ ಬೇಕೆ.

ಜಾತಿ ಮರೆತು
ಒಲಿದ ಜೀವಗಳು
ಸೇರಲಾರವೇ,

ಮದುವೆ ಮುಂಚೆ
ಏನಿದು ಜಾತಿ ಸಂಚೆ
ದೂರಮಾಡುವೆ.

ಎಂತಹ ಜನ
ಜೀವವಿರೋದಿತನ
ಸಹಿಸಲಾರೆ.

ಒಲುಮೆಯರ್ಥ
ತಿಳೀಯದ ಜಗದಿ
ಬದುಕೆ ವ್ಯರ್ಥ.

ಪ್ರೀತಿಯ ಪರಿ
ಅರಿಯದ ಬವದಿ
ಸಾವಿದು ಸೂಕ್ತ.

ಪ್ರೀತಿ ಸೂತಕ
ಆಚರಿಸಿ ಜನರೆ
ಹೋಗಿ ಬರುವೆ.

ಮುಂದಿನ ಜನ್ಮ
ಇದ್ದರೆ ನರನಾಗಿ
ಹುಟ್ಟದಿರುವೆ.

ನಿಮ್ಮಯ ಜಾತಿ
ನಿಮ್ಮಲಿರಲಿ ನಾನು
ಸಾಯುತಿರುವೆ.

ಜಗದ ತುಂಬಾ
ಪ್ರೇಮ ಒಂದೇ ಬಾಳಲಿ
ಜಾತಿ ಸಾಯಲಿ.

ಪ್ರೇಮಿಗಳೆಲ್ಲಾ
ಒಂದಾಗಿ ಜಾತಿಧರ್ಮ
ನಾಶವಾಗಲಿ.

ಮರಣಪತ್ರ
ಬರೆದು ಹೊರಟಿಹೆ
ಸಾವಿನೂರಿಗೆ.

ಸೂತಕ ಹೋಗಿ
ಒಲುಮೆ ಚಿಗಿತಾಗ
ಹುಟ್ಟಿಬರುವೆ.

-ಶಶಿಕಾಂತ ಯಡಹಳ್ಳಿ



ಮಂಗಳವಾರ, ಮಾರ್ಚ್ 11, 2014

ಇಂದಿನ ಪಾಠ :





ಹೃದಯಾಘಾತ
ಮೊಬೈಲ್ ಕಾಣದಿರೆ
ಹುಷಾರಾಗಿರಿ.

ಮೆದುಳಾಘಾತಾ
ಹೆಂಡತಿ ಕರದಲ್ಲಿ
ಪೋನ್ ಸಿಕ್ಕರೆ.

ಸೆಲ್ ಲ್ಲಿ ಕದ್ದು-
ಮುಚ್ಚಿ ಇಡುವಂತಾದ್ದು
ಏನಿದೆ ದೊರೆ.

ಗುಟ್ಟು ಗೊತ್ತಾದ್ರೆ
ಮುಂದೆ ಪರಿಣಾಮಕ್ಕೆ
ನೀವೇ ಹೊಣೆ.

ಹೆಂಡತಿ ಮುಂದೆ
ಏನೂ ಮುಚ್ಚಿಡಬೇಡಿ
ಸಿಕ್ಕಾಕೊಂತೀರಿ.

ಸೆಲ್ ಪೋನ್ ಗೆ
ಪಾಸ್ ವರ್ಡ್ ಹಾಕೋದು
ಮರೆಯದಿರಿ.

ಇಂದಿನ ಪಾಠ
ಇಷ್ಟೇ ಸಾಕು ಬಿಟ್ಟಾಕಿ
ನಾಳೆ ಕಾದಿರಿ.

-ಶಶಿಕಾಂತ ಯಡಹಳ್ಳಿ

ಸೋಮವಾರ, ಮಾರ್ಚ್ 10, 2014

ಹರಕೆಯ ಕುರಿಗಳು :











ರಾಜಕೀಯ ವಿಧಾನಸೌಧದಲ್ಲಿಲ್ಲ
ಈಗ  ಮನೆ ಮನಗಳೊಳಗೇ
ಅಕ್ಟೋಪಸ್ ನಂತೆ ಪಸರಿಸಿದೆ
ವೈರಸ್ ನಂತೆ ಹಬ್ಬಿನಿಂತಿದೆ
ಜನರೆಲ್ಲಾ ಹರಕೆಯ ಕುರಿಗಳು.

ರಾಜಕೀಯ ನಮಗೆ ಸಂಬಂಧಿಸಿದ್ದಲ್ಲ
ಎನ್ನುವಂತಿಲ್ಲ ನಿರ್ಲಕ್ಷಿಸುವಂತಿಲ್ಲ
ನಿಮಗೆ ಬೇಕೋ ಬೇಡವೋ
ನಿಮ್ಮ ಪಾಲಿಗೆ ನೀವು ಸುಮ್ಮನಿರುವಂತಿಲ್ಲ
ಯಾಕೆಂದರೆ ಎಲ್ಲರೂ ಹರಕೆಯ ಕುರಿಗಳು.

ಹೇಗಿರಬೇಕು ಎಲ್ಲಿರಬೇಕು ಏನುಮಾಡಬೇಕು
ಎಂತದ್ದು ಯೋಚಿಸಬೇಕು ಎಲ್ಲವನ್ನೂ
ಅಗೋಚರ ಶಕ್ತಿ ನಿರ್ಧರಿಸುತ್ತದೆ.
ಅದರ ವ್ಯಾಪ್ತಿ ಶಕ್ತಿಕೇಂದ್ರದಿಂದ ಬೇರಿಗಿಳಿದಿದೆ.
ಬಲಿಯಾಗುತ್ತಿವೆ ಹರಕೆಯ ಕುರಿಗಳು.

ಓಟು ಕೊಟ್ಟರೆ ಕೆಲಸ ಮುಗಿಯಿತು
ಎಂದುಕೊಳ್ಳುವುದೆಲ್ಲಾ ಹಸಿ ಸುಳ್ಳು,
ನಂತರ ನಡೆವ ದೊಡ್ಡಹೊಟ್ಟೆ ದೇವರುಗಳ
ಮಹಿಮೆ ಬಲ್ಲವನೇ ಬಲ್ಲ, ತಿಳಿಯದೇ
ಕೊರಳ ತಳಿರು ತಿನ್ನುತ್ತಿವೆ ಹರಕೆಯ ಕುರಿಗಳು.

ಕಿಟಿಕಿ ಬಾಗಿಲುಗಳ ಭದ್ರಪಡಿಸಿದರೂ
ಗಾಳಿಯಲ್ಲಿ ಹಾರಿ, ನಿರ್ವಾಣದಲಿ ತೂರಿ
ಬದುಕುಗಳ ನಿಯಂತ್ರಿಸುವ ಕಸಬುದಾರಿಕೆ
ಕಲಿತ ಕಲಿಗಳ ತಂತ್ರಗಾರಿಕೆ ಅರಿಯದೇ
ಬಲಪೀಠ ಆರಾಧಿಸುತ್ತವೆ ಹರಕೆಯ ಕುರಿಗಳು.

ಅಲ್ಲಿ ಭಾವನೆಗಳಿಲ್ಲ ಬದಲಿಸುವ ಬಣ್ಣಗಳಿವೆ,
ಅಲ್ಲಿ ಬದುಕಿಲ್ಲ ಹಾರಾಡುವ ಬಾವುಟಗಳಿವೆ.
ಅಲ್ಲಿ ಅಂತಃಕರಣವಿಲ್ಲ ಈಡೇರದ ಆಶ್ವಾಸನೆಗಳಿವೆ.
ಅಲ್ಲಿ ಯೋಚನೆಗಳಿಲ್ಲ ಬರೀ ಯೋಜನೆಗಳಿವೆ....
ಎಲ್ಲ ನೋಡಿ ಜೊಲ್ಲು ಸುರಿಸುತ್ತಿವೆ ಹರಕೆಯ ಕುರಿಗಳು.

ಅವನಬಿಟ್ಟು ಇವನಬಿಟ್ಟು ಅವನ್ಯಾರು...
ಎಂಥಾ ಸೊಗಸಿನಾಟ, ಕಾಯಿ ಬದಲಾದರೂ ಆಟಬದಲಾಗದು,
ವ್ಯಕ್ತಿ ಬದಲಾದರೂ ವ್ಯವಸ್ಥೆ ಬದಲಾಗದು...
ಜೂಜಿನಾಟದ ಮಾಟದಲ್ಲಿ ಮೈಮರೆತು
ನಲಿಯುತ್ತಿವೆ ಹರಕೆಯ ಕುರಿಗಳು.

ಈ ದೊಡ್ಡ ಹೊಟ್ಟೆ ದೇವರುಗಳ ಹಿಂದೆ
ಕಾರ್ಪೋರೇಟ್ ದೇವರುಗಳಿದ್ದಾವೆ.
ಅವುಗಳ ಹಿಂದೆ ಜಾಗತಿಕ ದೇವರಿದ್ದಾವೆ.
ಈ ಎಲ್ಲಾ ಅಗೋಚರ ದೇವರುಗಳ
ಸುಲಿಗೆಗೆ ಬಲಿ ಹರಕೆಯ ಕುರಿಗಳು.

-ಶಶಿಕಾಂತ ಯಡಹಳ್ಳಿ









ಪ್ರೇಮ ಕೂಡಾ ವ್ಯವಹಾರ :











ಸಿಡಿಯಿತು ಮಾತಿನ ಸಿಡಿಲು
ಛಿದ್ರ ಹೃದಯದ ಕಡಲು
ಏನಿದೇನಿದು ಕಣ್ಚಿತ್ತ ಗಮಲು.

ಮರೆತು ಬಿಡೆಂದರೆ ಮರೆಯುವುದೆಂತು
ಹೊರಟು ಬಿಡೆಂದರೆ ಹೊರಡುವುದೆಂತು
ಮನಸು ಕೊಟ್ಟು ಮರಳಿ ಪಡೆಯುವುದೆಂತು.

ಅಂತರಂಗದಲಿ ಕೋಲಾಹಲ
ಉದರದೊಳಗೆನೋ ಹಾಲಾಹಲ
ತಲ್ಲಣ ತಳಮಳ ಬದುಕೇ ದಾವಾನಲ.

ಬೇಕೆಂದಾಗ ಹತ್ತಿರವಂತೆ
ಬೇಡೆಂದಾಗ ದೂರಾಗುವುದಂತೆ
ಇದುವೇನಾ ಸಂಬಂಧ, ಇಷ್ಟೇನಾ ಅನುಬಂಧ.

ಯಾರನು ನಂಬಲಿ ಯಾರನು ಬಿಡಲಿ
ಒಲವಿನ ಹೃದಯ ಯಾರಿಗೆ ಕೊಡಲಿ
ಸುತ್ತಲು ಕತ್ತಲು ಮನವಿದು ಬೆತ್ತಲು.

ಪ್ರಣಯದ ಪರಿಗೆ ಸೋಲುವ ಮನಕೆ
ಸಗಟು ಸರಕು ಮಾರುವ ಜನಕೆ
ಪ್ರೀತಿಯೊಂದು ವ್ಯಾಪಾರ, ಪ್ರೇಮ ಕೂಡಾ ವ್ಯವಹಾರ.

-ಶಶಿಕಾಂತ ಯಡಹಳ್ಳಿ

( ಈ ಕವಿತೆಗೆ ಈಗ ಹನ್ನೆರಡು ವರ್ಷ, ಇನ್ನೂ ನನ್ನ ಮನದಾಳದಲ್ಲಿ ಜೀವಂತವಾಗಿದೆ. )





ನನಗೇನಾಗಿದೆ?










ನನಗೇನಾಗಿದೆ
ಎಂದು ಕೇಳುವೆಯಲ್ಲಾ
ಹುಚ್ಚು ಹಿಡಿದಿದೆ.

ನೋಡಿದ ಕ್ಷಣ
ನಿನ್ನ ಕೂಡಿದೆ ಮನ
ಪ್ರೀತಿ ಮೂಡಿದೆ.

ಎಂಥಾ ತಲ್ಲಣ
ಹೃದಯ ಬಣಬಣ
ಏನೋ ಕಾಡಿದೆ.

ಒಂದು ಸ್ಪಂದನ
ಇನ್ನೊಂದು ಆಲಿಂಗನ
ಮನ ಕೇಳಿದೆ.

ಹೂವು ಅರಳಿದೆ
ಪರಿಮಳ ಬೀರಿದೆ
ದುಂಬಿ ಕಾದಿದೆ.

ತಾಳೆಲಾರೆನು
ವಿರಹದುರಿಯನು
ಜೊತೆ ಬೇಕಿದೆ.

ಏನೇನಾಗಿದೆ
ನಿಜ ಹೇಳಲಾಗದೇ
ಹುಚ್ಚು ಕೆರಳಿದೆ.

ಮನಸು ಮಾಯೆ
ಸೂತಕದಂತ ಛಾಯೆ
ಎಲ್ಲೋ ಸಾವಿದೆ.

-ಶಶಿಕಾಂತ ಯಡಹಳ್ಳಿ
(ದಶಕಗಳ ಹಿಂದೆ ಬರೆದ ಕವಿತೆ ಇದು, ಇಂದೂ ಕಾಡುತಿದೆ.)