ಬುಧವಾರ, ಮೇ 7, 2014

ಅಗ್ನಿಪಥ :
















ಅಂಬೆ ಮಾದ್ರಿ ಗಾಂಧಾರಿ
ಮತ್ತದೇ ದ್ರೌಪತಿ ಕುಂತಿ
ಮಹಾಭಾರತದ ಕುಲುಮೆಯಲಿ
ನೊಂದು ಬೆಂದ ಸ್ತ್ರೀ ಸಂತತಿ.

ಅಂಬೆ ಅಗ್ನಿಗೆ, ಮಾದ್ರಿ ಚಿತೆಗೆ
ಗಾಂಧಾರಿ ಕತ್ತಲೆಗೆ ಬಲಿಯಾದರು.
ಕುಂತಿ ಕಂದಿಹೋದಳು, ದ್ರೌಪತಿ ಹಂಚಿಹೋದಳು
ಮಹಾಕಾವ್ಯ ಹೋಮಕೆ ಹವಿಸ್ಸಾದರು.

ಅಂಬೆ ಸೇಡಿಗೆ ಬಲಿಯಾದ ಭೀಷ್ಮ
ಗಾಂಧಾರಿ ಶಾಪಕೆ ಶವವಾದ ಕೃಷ್ಣ.
ಕುಂತಿ ಪುತ್ರಮೋಹಕೆ ಮೋಸಹೋದ ಕರ್ಣ
ದ್ರೌಪತಿ ಶಪತಕೆ ಧರಶಾಹಿ ಸುಯೋಧನ.

ಸಹನೆಗೊಂದು ಮಿತಿಯಿದೆ, ತಪ್ಪಿಗಿಷ್ಟು ಕ್ಷಮೆಯಿದೆ
ಎಲ್ಲ ಮೇರೆ ಮೀರಿ ಹೋದರೆ ಕೊನೆಗೆ ಸರ್ವನಾಶವಿದೆ.
ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ
ಒಲಿಸಿಕೊಂಡು ಕಂಡುಕೊಳ್ಳಿ ಬದುಕುವ ದಾರಿ.

-ಶಶಿಕಾಂತ ಯಡಹಳ್ಳಿ
('ನಟನ' ತಂಡದ ಅಗ್ನಿಪಥ ನಾಟಕದ ಪ್ರೇರಣೆಯಿಂದ ಬರೆದ ಕವಿತೆ)




ಚುನಾವಣಾ ಸಂಹಿತೆ ಜಾರಿಯಲ್ಲಿದೆ:





ಶ್ಶ!  ಯೇ ಕುಹೂ ಕುಹೂ
ಕೂಗಬೇಡಲೇ ಕೋಗಿಲೆ
ಚುನಾವಣಾ ಸಂಹಿತೆ ಜಾರಿಯಲ್ಲಿದೆ.

ಸಿಕ್ಕಲೆಲ್ಲಾ ಸಿಕ್ಕಂತೆ
ಬೊಗಳಬೇಡವೇ ಶ್ವಾನ
ಚುನಾವಣಾ ಸಂಹಿತೆ ಜಾರಿಯಲ್ಲಿದೆ.

ಕೂಗೋರೆಲ್ಲಾ ಕೂಗಿಕೊಳ್ಳಲಿ
ಬೊಗಳೋರೆಲ್ಲಾ ಬೊಗಳಿಕೊಳ್ಳಲಿ
ಬಾಯಿಮುಚ್ಚಿ ಕಾಗೆಗಳೆ ಚುನಾವಣಾ ಸಂಹಿತೆ ಜಾರಿಯಲ್ಲಿದೆ.

-ಶಶಿಕಾಂತ ಯಡಹಳ್ಳಿ

ಶ್ವಾನಾವತಾರ : (ಕವಿತೆ)





















ಶ್ವಾನವೊಂದು ವೃತ್ತದ ಬಳಿ ಬಂದು 
ನಾಯಿ ಬಳಗವೆಲ್ಲ ಕರೆತಂದು
ಜೋರಾಗಿ ಬೊಗಳುತಿದೆ.

ಹಿಂದೆ ಗೋಡೆ ಕಂಬಕ್ಕಟ್ಟಿದ
ಬಣ್ಣ ಬಣ್ಣದ ಬ್ಯಾನರು ಪೋಸ್ಟರು
ಪಕ್ಷವೊಂದರ ಬಾವುಟ ಹಾರುತಿದೆ.

ನೋಡಿದವರು ಓಡಿಬಂದು
ನಾಯಿಬಳಗಕೆ ಗದರಿ ಹೇಳಿದರು
' ಬೊಗಳಬೇಡಿ ಚುನಾವಣೆ ಸಂಹಿತೆ ಜಾರಿಯಲ್ಲಿದೆ',

ಶ್ವಾನಗಳೆಲ್ಲ ಕೋಪಗೊಂಡು
ಹೇಳಿದವರ  ಅಟ್ಟಸಿಕೊಂಡು
ಬೋಗಳೋ ಕಾಯಕ ಮುಂದುವರೆಸಿದವು.

ಆಯೋಗದಲಿ ದೂರಾಯಿತು
ನೊಟೀಸು ಜಾರಿಯಾಯ್ತು
ಬೊಗಳೋ ನಾಯಿ ಬಾಯಿ ಹಿಡಿಯೋರಾರು?

ಕೋಮುನಾಯಿ, ಕಾಮಿನಾಯಿ
ಭ್ರಷ್ಟನಾಯಿ, ಬಿಡಾಡಿ ನಾಯಿ
ಒಂದಾಗಿ ಚೆಂದಾಗಿ ಅರುಚುತಿರುವವು.

ಬೆದರಿಕೆಗೆ ಜಗ್ಗಲಿಲ್ಲ
ನೋಟಿಸಿಗೆ ಬಗ್ಗಲಿಲ್ಲ
ಹಾಗೂ ಹೀಗೂ ಚುನಾವಣೆ ಮುಗಿದೆ ಹೋಯಿತು.

ಕೇಸುಗಳೆಲ್ಲಾ ನಿಖಾಲಿಯಾದವು
ನಿರೀಕ್ಷಗಳೆಲ್ಲಾ ಹುಸಿಹೋದವು
ನಾಯಿಪಕ್ಷ  ಅಧಿಕಾರಕೆ ಬಂದಾಯಿತು


                                   -ಶಶಿಕಾಂತ ಯಡಹಳ್ಳಿ




 

ಭಾನುವಾರ, ಮೇ 4, 2014

ಕರಾಳ ಕನ್ನಡಿಕೊಂದು ಮುನ್ನುಡಿ :









ಮೋದಿ ಬಂದರು ದಾರಿ ಬಿಡಿ
ಮೋದಿ ಕೈಗೆ ದೇಶ ಕೊಡಿ.

ದೇಶದ ತುಂಬಾ ಹೊಡಿ ಬಡಿ ಕಡಿ
ಮುಸ್ಲಿಂರ ಗಡಿ ಪಾರು ಮಾಡಿ ಬಿಡಿ.
ಹೊಲೆಯ ದಲಿತ ಶೂದ್ರ ಸಂತಾನ
ಉಳ್ಳವರ ಮನೆ ಜೀತಕ್ಕಿರಲಿ ಬಿಡಿ.
ಮೋದಿ ಬಂದರು ದಾರಿ ಬಿಡಿ

ನೆತ್ತರ  ಓಕಳಿ ಹರಿಯಲಿ ಬಿಡಿ
ಪ್ಯಾಸಿಸ್ಟ್ ಪ್ರಭುತ್ವ ಆಳಲಿ ಬಿಡಿ.
ಸಾಹಿತಿ ಕಲಾವಿದರ, ಬುದ್ದಿಜೀವಿ ಎಡಪಂಥೀಯರ
ಗುಂಡಿಟ್ಟು ಗಲ್ಲಿಗೇರಿಸಲಿ ಬಿಡಿ.
ಮೋದಿ ಬಂದರು ದಾರಿ ಬಿಡಿ


ಅಂಬಾನಿ ಆದಾನಿ ಬಂಡವಾಳಿಗರಿಗೆ ದೇಶ ಮಾರಲಿ ಬಿಡಿ
ನ್ಯಾನೋ ಗೀನೋ ನೆಲ ನುಂಗಲಿ ಬಿಡಿ.
ಸಾಯುವುದಿದ್ದರೆ ರೈತರು ಸಾಯಲಿ ಬಿಡಿ
ಸಾಯದಿದ್ದರೆ ಭೂಮಿ ಕಿತ್ತು ಸಾಯಿಸಿ ಬಿಡಿ.
ಮೋದಿ ಬಂದರು ದಾರಿ ಬಿಡಿ

ಪ್ರಜಾಪ್ರಭುತ್ವ ಗತಕಾಲ ಸೇರಲು ಬಿಡಿ
ಮನುವಾದ ಸಂವಿಧಾನವಾಗಲಿ ಬಿಡಿ.
ಮಹಿಳೆಯರನ್ನು ಮನೆಯಲಿ ಕಟ್ಟಿಹಾಕಿ
ಪುರುಷರ ಸಾಮ್ರಾಜ್ಯ ವಿಜ್ರಂಭಿಸಲು ಬಿಡಿ.
ಮೋದಿ ಬಂದರು ದಾರಿ ಬಿಡಿ

ಓಟು ಹಾಕಿದವರು ಪಾಠ ಕಲಿಯಲಿ  ಬಿಡಿ
ಪಡೆದ ನೋಟಿಗೆ ಬದುಕು ಒತ್ತೆ ಇಡಲಿ ಬಿಡಿ.
ಪುರೋಹಿತ ಪಂಡಿತರು ಸನಾತನವಾದಿಗಳು ಮೆರೆಯಲಿ ಬಿಡಿ
ಅರಳಿದ ಕಮಲ ಜನರ ಕಿವಿಗೇರಲಿ ಬಿಡಿ.

ಮೋದಿ ಬಂದರು ದಾರಿ ಬಿಡಿ
ಮೋದಿ ಕೈಗೆ ದೇಶ ಕೊಡಿ

-ಶಶಿಕಾಂತ ಯಡಹಳ್ಳಿ