ಗುರುವಾರ, ಜೂನ್ 11, 2015

ಸಖಿ ಗೀತೆ......346

ಸಖಿ....

ಯಾರು ಏನೇ ಹೇಳಲಿ
ದೇವರೆಂಬೋ ಕಲ್ಪನೆಯೇ ಅಪೂರ್ಣ...
ಇಲ್ಲೀವರೆಗೂ ಯಾರಿಗೂ
ದಕ್ಕಿಲ್ಲ ದೇವರು ಸಂಪೂರ್ಣ...

ಅವರವರ ಭಾವ ಬಕುತಿಗೆ
ನಂಬಿಕೆ ಆಚರಣೆ ಆಕಾಂಕ್ಷೆಗೆ
ತಕ್ಕಂತೆ ದೇವರ ರೂಪಕ..
ತಾತ್ಕಾಲಿಕ ಬದುಕಿನಲಿ ಎಲ್ಲವೂ
ಖಾಯಂ ಆಗಿ ಬೇಕೆನ್ನುವವರ
ಬಯಕೆಯ ಪ್ರತೀಕ....

ಇದ್ದಾನೆ ಇಲ್ಲ ಎಂಬುವವರಾರೂ ಕಂಡಿಲ್ಲ,
ದೇವರಿನ್ನೂ ಯಾರ ಕಣ್ಣಿಗೂ ಬಿದ್ದಿಲ್ಲ..
ಇರಬಹುದು ಇಲ್ಲದಿರಬಹುದೆಂಬ
ಊಹಾಪೋಹಗಳಿಗಂತೂ ಕೊನೆಮೊದಲಿಲ್ಲ...

ಕುರುಡರು ಆನೆ ಮುಟ್ಟಿದಂತೆ
ಅವರವರ ಅನುಭವಕ್ಕೆ ದಕ್ಕಿದಷ್ಟು ವಿವರಣೆ...
ಆಸ್ತಿಕರಿಂದ ನಿತ್ಯ ಪೂಜಾರಾಧನೆ
ನಾಸ್ತಿಕರಿಂದ ಎಲ್ಲಾ ನಿರಾಕರಣೆ.....

ಮೂರ್ತರೂಪಕ್ಕಿರುವ ತರ್ಕಬದ್ಧತೆ
ಅಮೂರ್ತದ ವ್ಯಾಖ್ಯಾನಕ್ಕೆಲ್ಲಿ....?
ಭೌತಿಕ ಪ್ರಪಂಚದ ಪರಿಕಲ್ಪನೆಗೆ
ತಾರ್ಕಿಕ ನೆಲೆಯೆಲ್ಲಿ ಭಾವಲೋಕದಲ್ಲಿ...?

ಇಂದ್ರೀಯಗಳಿಗೆ ದಕ್ಕಿದ್ದನ್ನು
ವಾದಿಸಬಹುದು ಸಾಧಿಸಬಹುದು...
ಅಗೋಚರ ಅತೀಂದ್ರೀಯ ಅನುಭೂತಿಯನ್ನು
ಹಾಗೂ ಹೀಗೂ ಊಹಿಸಬಹುದು....

ಮನಸುಗಳ ಬೆಸೆಯುವುದಿದ್ದರೆ
ಇದ್ದರಿರಲಿ ಬಿಡು ದೇವರು ತನ್ನ ಪಾಡಿಗೆ...
ಮನಸುಗಳ ಒಡೆಯುವುದಿದ್ದರೆ
ಕಳಿಸಿಬಿಡು ಎಲ್ಲಾ ದೇವರ ಕಾಡಿಗೆ....

ಎಲ್ಲಾ ವಾದಗಳನು ಗೆಲ್ಲಲೇಬೇಕೆಂದೇನಿಲ್ಲ,
ನಿಖರವಾಗಿ ಗೊತ್ತಿಲ್ಲದರ ಕುರಿತು
ಬದುಕು ಪೂರಾ ವಾದಿಸುವ ಬದಲು...
ಪರಸ್ಪರ ನಂಬಿಕೆಗಳನು ಗೌರವಿಸಿ
ಅಪನಂಬಿಕೆಗಳನು ನಿರ್ಲಕ್ಷಿಸಿದರೆ
ಬಗೆಹರಿದೀತು ದಿಗಿಲು......

- ಯಡಹಳ್ಳಿ

ಸಖಿ ಗೀತೆ......345

ಸಖಿ...

ಗೆಲುವೆಂಬುದೇನು
ಆಕಾಶದಿಂದ ಉದುರುವುದೇ...?
ಸೋಲೆಂಬುದೇನು
ಪಾತಾಳದಿಂದ ಉದಯಿಸುವುದೇ..?

ಗೆಲ್ಲಲೇಬೇಕೆಂದರೆ
ಏಳು, ಎಚ್ಚರಾಗು, ಓಡು...
ಅಕ್ಕಪಕ್ಕದ ಆಕರ್ಷಣೆ ಬಿಟ್ಟು
ಸದಾ ಗುರಿಯತ್ತ ನೋಡು....

ಬಿದ್ದವರೆಷ್ಟೋ ಎದ್ದವರೆಷ್ಟೋ
ಬದುಕಿನ ಓಟದ ಆಟದಲಿ....
ಬಿದ್ದು ಮತ್ತೆ ಎದ್ದವರೆಷ್ಟೋ
ನಿತ್ಯ ಸಾಗುವ ಬದುಕಿನಲಿ....

ಆಡಲೇಬೇಕು ಬದುಕಿನ ಆಟ
ಕಲಿಯಲೇ ಬೇಕು ಗೆಲ್ಲುವ ಪಾಠ...
ಸೋಲಿಲ್ಲದೇ ಎಲ್ಲೂ ಗೆಲುವಿಲ್ಲಾ
ಸತತ ಯತ್ನ ಮಾಡದವರಾರೂ
ಇಲ್ಲಿವರೆಗೂ ಗೆದ್ದಿಲ್ಲಾ...

- ಯಡಹಳ್ಳಿ

ಸಖಿ ಗೀತೆ......344

ಸಖಿ..

ಅತೃಪ್ತಿಯಿಂದ
ಸಾಧಿಸಿದ
ಯಶಸ್ಸಿಗಿಂತಲು....

ಸಂತೃಪ್ತಿಯ
ಬದುಕು ಎಲ್ಲಕ್ಕಿಂತ
ಮಿಗಿಲು....

ಭೌತಿಕ ಯಶಸ್ಸಿಗೇನು
ಬಹಿರಂಗದಲ್ಲಿ
ಭಾರೀ ಬೆಲೆ....

ತೃಪ್ತ ಬದುಕಿಗೆ
ಅಂತರಂಗದಲ್ಲಿದೆ
ಜೀವ ಸೆಲೆ....

ಒತ್ತಡ ಒತ್ತಾಯ
ಪರರ ಇಚ್ಚೆಗಳಿಗಾಗಿ
ಬದುಕುವುದು ಪಕ್ಕಕ್ಕಿರಲಿ...

ನಮ್ಮಿಚ್ಚೆಯಂತೆ ನಡೆದು
ನೆಮ್ಮದಿಯ ಪಡೆಯಲಿರುವುದೊಂದೇ
ಜೀವನ ಲೆಕ್ಕಕ್ಕಿರಲಿ....

- ಯಡಹಳ್ಳಿ

ಸಖಿ ಗೀತೆ......343

ಸಖಿ...

ನಮಗಾಗದವರು
ಅದೆಷ್ಟು ಕೆಟ್ಟದಾಗಿ
ನಡೆದುಕೊಂಡರೇನು...?
ಬೆನ್ನ ಹಿಂದೆ ಬೇಕಾದಂತೆ
ಆಡಿಕೊಂಡರೇನು..?

ಅವರಷ್ಟು ಕೀಳು ಮಟ್ಟಕ್ಕೆ
ನಾವಿಳಿದರೆ ಅವರಿಗೂ
ನಮಗೂ ವ್ಯತ್ಯಾಸವೇನು....?
ನಾಯಿ ಬೊಗಳುತ್ತದೆಂದು
ನಾವೂ ಬೊಗಳುತ್ತೇವೇನು....?

ನಿಂದಕರಿದ್ದರಿರಲಿ ಬಿಡು
ಕೇರಿಯಲಿ ಹಂದಿ ಇದ್ದಹಾಗೆ
ಬೈಯುವವರ ಬೊಗಳುವವರ
ನಿರ್ಲಕ್ಷಿಸಿ ಮುನ್ನೆಡೆ ಆನೆಯ ಹಾಗೆ....

ಬದುಕಲ್ಲೊಮ್ಮೆ ಸೋತರೆ
ಆಳಿಗೊಂದು ಕಲ್ಲೆಸೆಯುತ್ತಾರೆ..
ಗೆದ್ದರೆ ಸರತಿಸಾಲಲಿ ನಿಂತು
ಓಡಿ ಬಂದು ಕೈಕುಲುಕುತ್ತಾರೆ....

ಅಡೆತಡೆಗಳೆಷ್ಟೇ ಇರಲಿ ದಾರಿಯಲಿ
ಸದಾ ಗೆಲುವಿನತ್ತ ಲಕ್ಷವಿರಲಿ...
ಕಾಲೆಳೆಯುವವರು ಎಲ್ಲಿ ಇರೋದಿಲ್ಲ
ಎಳೆಯಲು ಕಾಲು ಸಿಗದಷ್ಟು ಬೆಳೆಯಬೇಕಲ್ಲಾ....!!!

- ಯಡಹಳ್ಳಿ

ಸಖಿ ಗೀತೆ.....342

ಸಖಿ...

ಯಾರು ಹೇಳಿದವರು..?

ಮನುಷ್ಯರು ಕಳ್ಳರು
ಸುಳ್ಳರು ಆತ್ಮವಂಚಕರೆಂದು....
ಹಿಂಸಕರು, ದ್ವಂಸಕರು
ಸ್ವಾರ್ಥಿಗಳು ಪಾತಕಿಗಳೆಂದು..

ಮನುಷ್ಯರೆಂದೂ
ಜೀವವಿರೋಧಿಗಳಲ್ಲ,
ಕೆಟ್ಟ ಕೆಲಸ ಮಾಡುವುದಿಲ್ಲ,
ನೀಚರಂತೂ ಮೊದಲೇಅಲ್ಲ...

ಜನಪೀಡಕರು
ಸಮಾಜದ್ರೋಹಿಗಳು
ದುಷ್ಟ ದುರಾಚಾರಿಗಳೆಲ್ಲಾ
ಮನುಷ್ಯರೇ ಅಲ್ಲ.....!!!

- ಯಡಹಳ್ಳಿ

ಬುಧವಾರ, ಜೂನ್ 10, 2015

ಸಖಿ ಗೀತೆ.....341

ಸಖಿ...

ಪಡ್ಡೆ ಹುಡುಗರು
ಅವಳಿವಳೆದೆ
ಕಣ್ಣು ಕೆನ್ನೆ ತುಟಿ
ನಿತಂಬಗಳ ಮೇಲೆ
ಕಣ್ಗಾವಲಿಡುವುದನು
ಬಿಡಬೇಕೆಂದರೂ...

ಟಿವಿ ವಾಹಿನಿಗಳು
ನೆಟ್ ಮೀಡಿಯಾಗಳು
ಸಿನೆಮಾ ಮೊಬೈಲಗಳು
ಪ್ರಚೋದಿಸುತ್ತವೆ...

ದೇಶದಲ್ಲಿ
ಅತ್ಯಾಚಾರ
ಹೆಚ್ಚುತ್ತಿವೆ.....!

-ಯಡಹಳ್ಳಿ

ಸಖಿ ಗೀತೆ......340

ಸಖಿ...

" ಸಮಾನತೆ ಸಿಗುವವರೆಗೂ
ರಾಜಿ ರಹಿತ ಹೋರಾಟ,
ಹಸನಾಗಲಿ ದುಡಿಯುವವರ ಬಾಳು....

ಕೆಚ್ಚಿಲ್ಲದ ಕಿಚ್ಚಿಲ್ಲದ
ನರಜನ್ಮ ಯಾಕೆ
ಬೇಕು ಹೇಳು...."

ಎಂದೆಲ್ಲಾ
ಯುವಕರಾಗಿದ್ದ ನಮ್ಮ
ತಲೆಗೆ ಹುಳುಬಿಟ್ಟ
ಅಂದಿನ ಕ್ರಾಂತಿಕಾರಿ..

ಇಂದು ಸರಕಾರಿ
ಕೃಪಾ ಪೋಷಿತ
ಪ್ರಾಧಿಕಾರದ ಅಧಿಕಾರಿ....!

- ಯಡಹಳ್ಳಿ